ಧಾರವಾಡ: ರಾಜ್ಯದಲ್ಲಿ ಆಗುತ್ತಿರುವ ವೈದ್ಯರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಹಾಗೂ 2009ರಲ್ಲಿ ವೈದ್ಯರ ರಕ್ಷಣೆಗೆ ರೂಪಿಸಿರುವ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ರ್ಯಾಲಿ ಕೈಗೊಂಡು, ಡಿಸಿ ಕಚೇರಿಗೆ ಆಗಮಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಲಕ್ಷಾಂತರ ರೂ. ವೆಚ್ಚ ಮಾಡಿ ವೈದ್ಯಕೀಯ ಕ್ಷೇತ್ರ (ಸೇವೆ) ಆಯ್ಕೆ ಮಾಡಿಕೊಂಡಿರುವ ವೈದ್ಯರು ರೋಗಿಯ ಪ್ರಾಣ ಉಳಿಸಲು ಹಗಳಿರುಳು ಶ್ರಮಿಸುತ್ತಾರೆ.
ಸಾಕಷ್ಟು ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಿಸದೇ ರೋಗಿ ಮೃತಪಟ್ಟ ಘಟನೆಗಳು ನಡೆದಾಗ ವೈದ್ಯರನ್ನು ದೂಷಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ವೈದ್ಯರು ನಿರ್ಭಿತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ ಎಂದು ದೂರಿದರು. ವಿನಾಕಾರಣ ವೈದ್ಯರನ್ನು ತಪ್ಪಿತಸ್ಥರನ್ನಾಗಿಸಿ ಹಲ್ಲೆ ಮಾಡುವ ಹೇಯ ಕೃತ್ಯಗಳು ರಾಜ್ಯದಲ್ಲಿ ಹೆಚ್ಚುತ್ತಿವೆ.
ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ವೈದ್ಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ 2009ರಲ್ಲಿ ರೂಪಿಸಲಾದ ಕಾಯ್ದೆ ಜಾರಿಗೆ ತರಬೇಕು. ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಆರೋಪಿಗೆ ಮೂರು ವರ್ಷ ಜಾಮೀನು ರಹಿತ ಬಂಧನ, ಆಸ್ಪತ್ರೆಯ ಪೀಠೊಪಕರಣ ನಾಶಪಡಿಸಿದಲ್ಲಿ ವಸ್ತುವಿನ ಮೌಲ್ಯದ ಎರಡು ಪಟ್ಟು ಹಣ ವಸೂಲಿ ಮಾಡಬೇಕು.
ಈ ಕುರಿತು ಸಾರ್ವಜನಿಕರ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಹಾಕಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಆರೋಗ್ಯ ಇಲಾಖೆ ಮುಂದಾಗಬೇಕು. ಅದೇ ರೀತಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ವೈದ್ಯರು ಹಿಂದೇಟು ಹಾಕಿದರೆ ಅಂಥ ವೈದ್ಯರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳುವ ಕುರಿತು ಆಸ್ಪತ್ರೆಗಳಲ್ಲಿ ಜಾಗೃತಿ ಫಲಕ ಹಾಕಬೇಕು ಎಂದು ಆಗ್ರಹಿಸಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ| ಸುಭಾಷ ದೇಶಪಾಂಡೆ, ಡಾ| ವೆಂಕಟೇಶ ಅಣ್ಣಿಗೇರಿ, ಡಾ|ರಂಗನಾಥ ಕುಲಕರ್ಣಿ ಸೇರಿದಂತೆ ನೂರಾರು ವೈದ್ಯರು ಪಾಲ್ಗೊಂಡಿದ್ದರು.