Advertisement

ಸೆಂಟ್ರಲ್‌ ಮಾರ್ಕೆಟ್‌, ಮೀನುಗಾರಿಕಾ ದಕ್ಕೆ ಬಂದ್‌

09:56 AM Apr 24, 2018 | Team Udayavani |

ಮಹಾನಗರ: ಜಮ್ಮು- ಕಾಶ್ಮೀರದಲ್ಲಿ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ನಗರದ
ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಮತ್ತು ಹಸಿ ಮೀನು ಮಾರಾಟಗಾರರು ಸೋಮವಾರ ಹರ ತಾಳ ಆಚರಿಸಿದರು. ಇದರಿಂದ ಸದಾ ಜನಸಂದಣಿಯಿಂದ ಗಿಜಿಗುಡುತ್ತಿದ್ದ ಸೆಂಟ್ರಲ್‌ ಮಾರುಕಟ್ಟೆ ಮತ್ತು ಮೀನು ವ್ಯಾಪಾರ ಕೇಂದ್ರಗಳು ಬಿಕೋ ಎನ್ನುತ್ತಿದ್ದವು.

Advertisement

ವಿಶೇಷವೆಂದರೆ ಈ ಮಾರುಕಟ್ಟೆಗಳ ಹೊರಭಾಗದಲ್ಲಿ ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು ಮತ್ತು ಟೋಕಿಯೋ ಮಾರ್ಕೆಟ್‌ನ ಎಲ್ಲ ಅಂಗಡಿಗಳು ಕೂಡ ತಮ್ಮ ಅಂಗಡಿಗಳನ್ನು ಮುಚ್ಚಿದ್ದವು. ಯಾವುದೇ ಸಂಘ- ಸಂಸ್ಥೆಗಳು ಹರತಾಳಕ್ಕೆ ಕರೆ ನೀಡಿಲ್ಲವಾದರೂ ಸೆಂಟ್ರಲ್‌ ಮಾರುಕಟ್ಟೆ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ, ಬಾಲಕಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಇದರಿಂದ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಸೆಂಟ್ರಲ್‌ ಮಾರ್ಕೆಟ್‌ ಸೋಮವಾರ ಸಂಪೂರ್ಣ ಸ್ತಬ್ಧಗೊಂಡಿತ್ತು. 

ಹಿಂದಿನ ದಿನ ಬಾಕಿಯಾದ ಕೆಲವು ತರಕಾರಿಗಳನ್ನು ಸಂಪೂರ್ಣ ಕಟ್ಟಿ ಇಡಲಾಗಿತ್ತು. ಕೇವಲ ಪಾರ್ಕಿಂಗ್‌ ನಿರತ ವಾಹನಗಳು, ಅತ್ತಿಂದಿತ್ತ ಓಡಾಡುವ ಜನಸಾಮಾನ್ಯರನ್ನು ಬಿಟ್ಟರೆ ನಿತ್ಯದ ವ್ಯಾಪಾರ ಇರಲಿಲ್ಲ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಷ್ಟೇ ಹರತಾಳ ಆಚರಿಸಿದ್ದರು. ಉಳಿದಂತೆ ಮಾರ್ಕೆಟ್‌ನಲ್ಲಿ ಅಂಗಡಿ ಹೊಂದಿರುವ ವ್ಯಾಪಾರಸ್ಥರ ವ್ಯಾಪಾರ ಎಂದಿನಂತೇ ಇತ್ತು.

ಸ್ವಯಂ ಪ್ರೇರಿತರಾಗಿ ಬಂದ್‌
ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬಂದ್‌ ನಡೆಸಿದ್ದಾರೆಯೇ ಹೊರತು, ಸಂಘದ ವತಿಯಿಂದ ಬಂದ್‌ಗೆ ಕರೆ ನೀಡಲಿಲ್ಲ ಎಂದು ಮಂಗಳೂರು ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಎಂ.ಕೆ. ಮುಸ್ತಫಾ ತಿಳಿಸಿದ್ದಾರೆ.

ದಕ್ಕೆಯಲ್ಲಿ ಸಂಪೂರ್ಣ ಬಂದ್‌
ನಗರದ ಮೀನುಗಾರಿಕಾ ದಕ್ಕೆಯಲ್ಲಿಯೂ ಪ್ರತಿಭಟನೆ ನಡೆಯಿತು. ಇದರಿಂದ ಇಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ನಿಲುಗಡೆಯಾಗಿತ್ತು.

Advertisement

ಹಳೆ ಬಂದರು ದಕ್ಕೆಯ ಹಸಿ ಮೀನು ಮಾರಾಟಗಾರರು ಮತ್ತು ಕಮಿಷನ್‌ ಏಜೆಂಟರ ಸಂಘವು ಕರೆ ನೀಡಿದ ಬಂದ್‌ಗೆ ಮೀನುಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಬೋಟ್‌ಗಳು ಸಮುದ್ರಕ್ಕೆ ಇಳಿಯಲಿಲ್ಲ. ದಕ್ಕೆಯಲ್ಲಿ ಕೆಲಸ ನಿರತ ಕಾರ್ಮಿಕರು ಕೂಡ ತಮ್ಮೆಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು.

ಮನವಿ ಸಲ್ಲಿಕೆ
ಪ್ರಕರಣವನ್ನು ಖಂಡಿಸಿ, ಬಾಲಕಿಯ ಕುಟುಂಬಕ್ಕೆ ನ್ಯಾಯ ನೀಡು ವಂತೆ ಒತ್ತಾಯಿಸಿ ಕಾರ್ಮಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಮೀನಿನ ಅಲಭ್ಯತೆ:
ಬರಿಗೈಯಲ್ಲಿ ವಾಪಸ್‌ ದಕ್ಕೆಯಲ್ಲಿ ಮೀನು ವ್ಯವಹಾರ ಸ್ತಬ್ಧವಾಗಿದ್ದರಿಂದ ನಗರದ ಮೀನು ಮಾರುಕಟ್ಟೆಗಳು ಸಂಪೂರ್ಣ ಬಂದ್‌ ಆಗಿದ್ದವು. ಸ್ಟೇಟ್‌ಬ್ಯಾಂಕ್‌, ಜಪ್ಪು, ಉರ್ವ ಸಹಿತ ವಿವಿಧ ಮೀನು ಮಾರುಕಟ್ಟೆಗಳಲ್ಲಿ ಮೀನಿನ ಅಲಭ್ಯತೆ ಉಂಟಾಯಿತು. ಬಂದ್‌ ಬಗ್ಗೆ ಅರಿವಿಲ್ಲದೆ ಮೀನು ಖರೀದಿಗೆ ಬಂದ ಸಾರ್ವಜನಿಕರು ಬರಿಗೈಯಲ್ಲಿ ಹಿಂದಿರುಗುವಂತಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next