Advertisement

ಯೂರಿಯಾ ಗೊಬರ ಕೊರತೆಗೆ ಖಂಡನೆ

05:48 PM Sep 01, 2020 | Suhan S |

ಶಿರಸಿ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆ ಖಂಡಿಸಿ ತಾಲೂಕಿನ ದಾಸನಕೊಪ್ಪದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಮುಖರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಎಂ. ನಾಯ್ಕ, ರೈತರಿಗೆ ಸರಕಾರ ಯೂರಿಯಾ ಗೊಬ್ಬರವನ್ನು ಸಾಕಷ್ಟು ಪೂರೈಸಬೇಕು.ರೈತರು ಹಿಂದಿನಿಂದಲೂ ಯೂರಿಯಾ ಗೊಬ್ಬರವನ್ನು ಬಳಕೆ ಮಾಡುತ್ತಾ ಬಂದಿದ್ದಾರೆ. ಅದಿಲ್ಲದೇ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂಬಂತಾಗಿದೆ. ಆದರೆ ಸರಕಾರ ರೈತರಿಗೆ ಬೇಕಾದಷ್ಟು ಗೊಬ್ಬರ ಪೂರೈಸಲು ಮುಂದಾಗಬೇಕು. ಕೇವಲ ಭರವಸೆಗೆ ಸೀಮಿತವಾಗಬಾರದು. ರೈತರಿಗೆ ಬೇಕಾದ ಸೌಲಭ್ಯ ಒದಗಿಸಲಿ ಮೀನಮೇಷ ಮಾಡಿದರೆ ಮುಂದೊಂದು ದಿನ ಆಹಾರದ ಬೆಳೆ ಕೊರತೆಯಾಗುವ ಆತಂಕವಿದೆ. ಅತಿಯಾದ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ರೋಗಗಳು ಬಾಧಿಸುತ್ತಿವೆ. ರೈತರು ಸಾಲ ತುಂಬುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಸರಕಾರ ಉದ್ಯಮಿಗಳ ಸಾಲ ಮನ್ನ ಮಾಡುವಂತೆ ರೈತರ ಸಾಲವನ್ನೂ ಮನ್ನಾ ಮಾಡಬೇಕು. ಇಲ್ಲವೇ ಸಾಲ ತುಂಬುವ ಅವಧಿಯನ್ನು ಮುಂದಕ್ಕೆ ಹಾಕಬೇಕು ಎಂದೂ ಒತ್ತಾಯಿಸಿದರು.

ವರ್ಗಾವಣೆಗೆ ಖಂಡನೆ: ಶಿರಸಿ ಸಹಾಯಕ ಆಯುಕ್ತರಾಗಿದ್ದ ಡಾ| ಈಶ್ವರ ಉಳ್ಳಾಗಡ್ಡಿ ಅವರನ್ನು ಅವಧಿಪೂರ್ಣವಾಗುವ ಮುನ್ನ ವರ್ಗಾವಣೆ ಮಾಡಿರುವುದನ್ನೂ ಇದೇ ವೇಳೆ ಖಂಡಿಸಿ, ಕಳೆದ ಬಾರಿ ನೆರೆ, ಅತಿವೃಷ್ಟಿ ಹಾಗು ಕೋವಿಡ್ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸಿ, ಅನೇಕ ವಿಚಾರಗಳಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ರೈತ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಅಂಥ ಅಧಿಕಾರಿಯನ್ನು ವರ್ಗಾವಣೆ ಕೈಬಿಟ್ಟು ಜಿಲ್ಲೆಯಲ್ಲೇ ಅವರ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಕ್ಯಾದಗಿಕೊಪ್ಪ, ದೀಪಕ ಎಂ.ಎಸ್‌., ಜಾಕೀರ ದಾಸನಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಜಿಲ್ಲಾ ಕೃಷಿ ನಿರ್ದೇಶಕ ನಟರಾಜ, ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ತಹಶೀಲ್ದಾರ್‌ ಎಂ.ಆರ್‌. ಕುಲಕರ್ಣಿ ಬೇಡಿಕೆಗಳ ಮನವಿ ಸ್ವೀಕರಿಸಿದರು. ರೈತರ ಸಮಸ್ಯೆ ಆಲಿಸಿದರು. ಸಿಪಿಐ ಪ್ರದೀಪ ಬಿ.ಯು. ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next