Advertisement

ಕಾಂಡಿಮೆಂಟ್ಸ್‌ ಮಾಲೀಕನ ಕೊಂದ ಟೆಕ್ಕಿ!

12:16 PM Dec 17, 2018 | |

ಬೆಂಗಳೂರು: ಕಾಂಡಿಮೆಂಟ್ಸ್‌  ಮುಂದೆ ಹಾಕಿದ್ದ ನೀರಿನಿಂದಾಗಿ ಬುಲೆಟ್‌ ಬೈಕ್‌ನಿಂದ ಜಾರಿಬಿದ್ದ ಕಾರಣಕ್ಕಾಗಿ ಆಕ್ರೋಶಗೊಂಡ ಸಾಫ್ಟ್ವೇರ್‌ ಇಂಜಿನಿಯರ್‌ವೊಬ್ಬ ಚಾಕುವಿನಿಂದ ಇರಿದು ಕಾಂಡಿಮೆಂಟ್ಸ್‌ ಮಾಲೀಕನನ್ನು ಕೊಲೆ ಮಾಡಿ ಆತನ ಮಗನಿಗೂ ಇರಿದಿರುವ ಘಟನೆ ಮಹಾಲಕ್ಷ್ಮೀ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.

Advertisement

ಮಂಜುನಾಥ್‌ (55) ಕೊಲೆಯಾದವರು. ಆಕಾಶ್‌ (24) ಕೊಲೆ ಆರೋಪಿ. ಇಬ್ಬರ ನಡುವಿನ ಜಗಳದಲ್ಲಿ ಮೃತ ಮಂಜುನಾಥ್‌ ಅವರ ಪುತ್ರ ಮನೋಜ್‌ಗೂ ಚಾಕು ಇಗುಲಿದ್ದು, ಗಾಯಾಳು ಮನೋಜ್‌ ಹಾಗೂ ಆರೋಪಿ ಆಕಾಶ್‌ಗೆ ಇಬ್ಬರೂ ಆಸ್ಪತ್ರೆಯಲ್ಲಿ  ಚಿಕಿತ್ಸೆ ಮುಂದುವರಿದಿದೆ.

ಕೊಲೆಯಾದ ಮಂಜುನಾಥ್‌ ಅವರ ಪತ್ನಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಮದ್ಯದ ಅಮಲಿನಲ್ಲಿ ಆಕ್ರೋಶಗೊಂಡು ಆಕಾಶ್‌ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜೆ.ಸಿ.ನಗರದ ಪೈಪ್‌ಲೈನ್‌ ರಸ್ತೆಯಲ್ಲಿ ಶ್ರೀ ಸಾಯಿ ಕಾಂಡಿಮೆಂಟ್ಸ್‌ನ ಮಾಲೀಕ ಮಂಜುನಾಥ್‌ ಭಾನುವಾರ ಮುಂಜಾನೆ 5.20ರ ಸುಮಾರಿಗೆ, ಅಂಗಡಿ ಬಾಗಿಲು ತೆರೆದು ಮುಂಭಾಗ ನೀರು ಹಾಕಿ ಶುಚಿಗೊಳಿಸಿದ್ದರು. ಇದರಿಂದ ನೀರು ರಸ್ತೆಗೆ ಹರಿದಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಬುಲೆಟ್‌ನಲ್ಲಿ ಬಂದ ಆಕಾಶ್‌ ಜಾರಿಬಿದ್ದಿದ್ದಾನೆ.

ಇದರಿಂದ ಆಕ್ರೋಶಗೊಂಡ ಆಕಾಶ್‌, ಮಂಜುನಾಥ್‌ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ, ಆಕಾಶ್‌ ಚಾಕು ತೆಗೆದುಕೊಂಡು ಮಂಜುನಾಥ್‌ ಅವರ ಎದೆ ಹಾಗೂ ಹೊಟ್ಟೆಭಾಗಕ್ಕೆ ಬಲವಾಗಿ ಇರಿದಿದ್ದಾನೆ. ಪರಿಣಾಮವಾಗಿ ಅವರು ಕುಸಿದು ಬಿದ್ದಿದ್ದಾರೆ.

Advertisement

ಜಗಳ ಬಿಡಿಸಲು ಬಂದ ಮಂಜುನಾಥ್‌ ಪುತ್ರ ಮನೋಜ್‌ಗೂ ಇರಿದಿದ್ದಾನೆ. ಅಲ್ಲದೆ ಘಟನೆಯಲ್ಲಿ  ಆಕಾಶ್‌ ಎದೆಭಾಗಕ್ಕೂ ಚಾಕು ಇರಿತವಾಗಿದ್ದು, ಈ ಭೀಕರ ಘಟನೆ ಕಂಡ ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವದಿಂದ ಮಂಜುನಾಥ್‌ ಮೃತಪಟ್ಟಿದ್ದಾರೆ.  ಮನೋಜ್‌ಗೆ ಚಿಕಿತ್ಸೆ ಮುಂದುವರಿದಿದೆ. ಆಕಾಶ್‌ ಕೂಡ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿತದ ಅಮಲಿನಿಂದ ನಡೆಯಿತೇ ಕೊಲೆ?: ಆರೋಪಿ ತಂದೆ ಉದ್ಯಮಿಯಾಗಿದ್ದು, ಕಂಪ್ಯೂಟರ್‌ ಮಾರಾಟ ವ್ಯವಹಾರ ನಡೆಸುತ್ತಿದ್ದಾರೆ. ಆಕಾಶ್‌, ಮಾರತ್‌ಹಳ್ಳಿಯ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಶನಿವಾರ ರಾತ್ರಿ ಕುರುಬರಹಳ್ಳಿಯ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು ಪಾರ್ಟಿ ನಡೆಸಿ ಮದ್ಯ ಸೇವಿಸಿದ್ದ. ಮುಂಜಾನೆ ಎದ್ದು ರಾಜಾಜಿನಗರದ ಕಡೆ ಹೋಗುವಾಗ ನಡೆದ ಜಗಳದಲ್ಲಿ ಕೊಲೆ ಮಾಡಿದ್ದಾನೆ.

ಹೀಗಾಗಿ ಮದ್ಯದ ಅಮಲಿನಲ್ಲಿಯೂ ಆತ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಘಟನೆಯನ್ನು ಕಂಡ ಸ್ಥಳೀಯರು ಆತ ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿಸಿದ್ದಾರೆ.ಆದರೆ. ವೈದ್ಯರ ಪರೀಕ್ಷಾ ವರದಿ ಬರಬೇಕಾಗಿದ್ದು, ಈ ಹಂತದಲ್ಲಿ ಖಚಿತವಾಗಲು ತಿಳಿಸಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಬುಲೆಟ್‌ನಲ್ಲಿ ಜಾರಿ ಬಿದ್ದ ಕಾರಣಕ್ಕೆ ಆಕ್ರೋಶಗೊಂಡ ಆಕಾಶ್‌, ಕೃತ್ಯ ಎಸಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಹಲವು ದೃಷ್ಠಿಕೋನಗಳಲ್ಲಿ ತನಿಖೆ ಮುಂದುವರಿಸಲಾಗಿದೆ. ಆಕಾಶ್‌ನ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ಪರೀಕ್ಷಾ ವರದಿ ಬರಬೇಕಿದೆ ಎಂದು ಉತ್ತರ ವಿಭಾಗದ ಡಿಸಿಪಿ ಡಾ. ಚೇತನ್‌ ಸಿಂಗ್‌ ರಾಥೋಡ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next