Advertisement

ಉತ್ತಮ ಮಳೆ, ಕೃತಕ ನೆರೆ, ಕಾಂಕ್ರೀಟ್‌ ಸ್ಲ್ಯಾಬ್‌ ಬಿರುಕು

11:03 AM May 21, 2022 | Team Udayavani |

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಶುಕ್ರವಾರವೂ ಮುಂದುವರಿಯಿತು. ಗುರುವಾರ ಸಂಜೆ ಬಳಿಕ ತುಸು ಬಿಡುವು ನೀಡಿದ್ದ ಮಳೆ ತಡರಾತ್ರಿ ಮತ್ತೆ ಆರಂಭವಾಗಿ ಪೂರ್ತಿ ಮಳೆಯಾಯಿತು.

Advertisement

ಉಡುಪಿ, ಬ್ರಹ್ಮಾವರ, ಕಾಪು ಭಾಗ ಗಳಲ್ಲಿಯೂ ಇದೇ ರೀತಿ ಮಳೆ ಮುಂದು ವರಿಯಿತು. ಉಡುಪಿ ನಗರದ ಕರಾವಳಿ ಜಂಕ್ಷನ್‌ ಬಳಿ ಕೃತಕ ನೆರೆಹಾವಳಿ ಸೃಷ್ಟಿ ಯಾಯಿತು. ನಗರದ ಅಂಬಾಗಿಲು, ಕಲ್ಸಂಕ, ಆದಿಉಡುಪಿ, ತೆಂಕಪೇಟೆ, ಬಡಗು ಪೇಟೆ ಭಾಗಗಳಲ್ಲಿಯೂ ಮಳೆನೀರು ರಸ್ತೆ ಯಲ್ಲಿಯೇ ಹರಿಯುತ್ತಿತ್ತು.

ಶಿರಿಬೀಡು ಬಳಿ ಕೃತಕ ಹೊಂಡ

ಕೃತಕ ಹೊಂಡದಲ್ಲಿ ನೀರು ಶೇಖರಣೆ ಯಾಗಿ ತ್ಯಾಜ್ಯ ತುಂಬಿಕೊಂಡ ಘಟನೆ ಶಿರಿಬೀಡು ಬಳಿ ನಡೆಯಿತು.ಕಾಮಗಾರಿ ಗೆಂದು ಅಗೆದು ಹಾಕಲಾಗಿದ್ದ ಈ ಗುಂಡಿ ಹಲವು ದಿನಗಳಿಂದಲೂ ಖಾಲಿ ಬಿದ್ದಿತ್ತು. ಈಗ ಇಲ್ಲಿ ನೀರು ಶೇಖರಣೆಯಾಗಿದ್ದು, ರೋಗ ರಜಿನಗಳು ಆವರಿಸುವ ಭೀತಿಯೂ ಕಾಡುತ್ತಿದೆ. ಇದನ್ನು ತೆರವುಗೊಳಿಸದಿದ್ದರೆ ಪಾದಚಾರಿಗಳೂ ಇದಕ್ಕೆ ಬೀಳುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಥಳೀಯರು.

ಬನ್ನಂಜೆಯಲ್ಲಿ ನೆರೆ ಹಾವಳಿ

Advertisement

ಬನ್ನಂಜೆ ಗರೋಡಿಯ ಒಳಭಾಗದ ತಗ್ಗು ಪ್ರದೇಶಗಳಲ್ಲಿ ರಸ್ತೆಯಲ್ಲಿಯೇ ನೀರು ನಿಂತ ಪರಿಣಾಮ ವಾಹನ ಸವಾರರು ಭಯದಿಂದಲೇ ಚಾಲನೆ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಶುಭಸಮಾರಂಭಗಳಿಗೆ ಮಳೆಕಾಟ

ನಗರದ ಬಹುತೇಕ ಕಡೆಗಳಲ್ಲಿ ಶುಭ ಸಮಾರಂಭಗಳಿಗೆ ಮುಹೂರ್ತ ನಿಗದಿ ಆಗಿದ್ದು, ಮಳೆಯಿಂದಾಗಿ ಎಲ್ಲವೂ ಅಸ್ತವ್ಯಸ್ತ ವಾಗಿದೆ. ಜೂನ್‌ ತಿಂಗಳಿನ ಮಳೆಗಾಲಕ್ಕೂ ಮೊದಲು ಶುಭಕಾರ್ಯ ಮುಗಿಸಲು ಹೊರಟವರಿಗೆ ಆಸಾನಿ ಚಂಡಮಾರುತ ತಲೆನೋವು ಉಂಟು ಮಾಡಿದೆ.

ಕಾಂಕ್ರಿಟ್‌ ಸ್ಲ್ಯಾಬ್‌ನಲ್ಲಿ ಬಿರುಕು

ನಗರದ ಕಲ್ಸಂಕ ಭಾಗದಲ್ಲಿ ವರ್ಷಗಳ ಹಿಂದಷ್ಟೆ ಸುಸಜ್ಜಿತವಾಗಿ ನಿರ್ಮಿಸಿದ್ದ ಕಾಂಕ್ರಿಟ್‌ ಸ್ಲ್ಯಾಬ್‌ನಲ್ಲಿ ಬಿರುಕು ಬಿಟ್ಟ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸ್ಮಾರ್ಟ್‌ಸಿಟಿ ಕಾಮಗಾರಿಯು ನಡೆಯುತ್ತಿದ್ದು, ನಿರಂತರ ಸುರಿದ ಮಳೆಗೆ ಕಾಂಕ್ರಿಟ್‌ ರಸ್ತೆಯ ಸ್ಲ್ಯಾಬ್‌ಗಳು ಬಿರುಕು ಬಿಟ್ಟಿದೆ. ಕಳಪೆ ಕಾಮಗಾರಿಯಿಂದಲೂ ಹೀಗಾಗಿರುವ ಸಾಧ್ಯತೆಯಿದೆ. ವಾಹನ ಸವಾರರಿಗೆ ಯಾವುದೇ ಸಮಸ್ಯೆಯಾಗದಂತೆ ಸಂಬಂಧಪಟ್ಟ ಇಲಾಖೆ, ಜನ ಪ್ರತಿನಿಧಿಗಳು ತುರ್ತಾಗಿ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next