ಬೆಂಗಳೂರು: ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ಬಳಿ ಖಾಸಗಿ ಜಮೀನಿನಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಸಮಸ್ಯೆ ಹಾಗೂ ಅವರ ಗುಡಿಸಲು ತೆರವು ಕಾರ್ಯ ಕುರಿತು ಉಪಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾನೂನು ಬದ್ಧವಾಗಿ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಇಲ್ಲಿನ ಬಹುತೇಕರು ಚಿಂದಿ ಆಯುವ, ಕಟ್ಟಡ ಕಟ್ಟುವ ಕೆಲಸ ಮಾಡಿಕೊಂಡು ಹತ್ತಾರು ವರ್ಷಗಳಿಂದ ಖಾಸಗಿ ಜಮೀನಿನು ಒಂದರಲ್ಲಿ ಬಾಡಿಗೆ ನೀಡಿ ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದಾರೆ. ಇವರು ಕಸದ ರಾಶಿ ಹಾಕುತ್ತಾರೆ. ಸುತ್ತಮುತ್ತಲ ಪ್ರದೇಶವನ್ನು ಮಲಿನ ಮಾಡುತ್ತಿದ್ದಾರೆ. ಜತೆಗೆ ಅಕ್ರಮ ಬಾಂಗ್ಲಾ ವಾಸಿಗಳಿದ್ದಾರೆ ಎಂಬಿತ್ಯಾದಿ ದೂರುಗಳು ಸ್ಥಳೀಯ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಪಾಲಿಕೆ ಅಧಿಕಾರಿಗಳಿಗೆ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಪಾಲಿಕೆಯ ಮಹದೇವಪುರ ವಲಯದ ಅಧಿಕಾರಿಗಳು ಬೇಟಿ ನೀಡಿ ಜಾಗ ಖಾಲಿ ಮಾಡುವಂತೆ ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ, ನಿವಾಸಿಗಳು ಮಾತು ಕೇಳದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಸೋಮವಾರ ಬೆಳಗ್ಗೆ ಪೊಲೀಸ್ ಸಿಬ್ಬಂದಿ ಹಾಗೂ ಜೆಸಿಬಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಲ್ಲಿನ ನಿವಾಸಿಗಳು ಧರಣಿ ಕುಳಿತು ತೆರವು ಕಾರ್ಯಾಚರಣೆ ನಡೆಸಲು ಅವಕಾಶ ನೀಡಿರಲಿಲ್ಲ. ಇವರಿಗೆ ಸರ್ಕಾರೇತರ ಸಂಸ್ಥೆಗಳು, ಮಾನವ ಹಕ್ಕು ಹೋರಾಟ ಸಂಘಟನೆಗಳು ಬೆಂಬಲ ಸೂಚಿಸಿದರು. ಹೀಗಾಗಿ, ಪಾಲಿಕೆ ಅಧಿಕಾರಿಗಳು ಮೂರು ದಿನ ಕಾಲಾವಕಾಶ ನೀಡಿದ್ದರು.
ಸರ್ಕಾರದೊಂದಿಗೆ ಚರ್ಚೆ: ಕುಂದಲಹಳ್ಳಿ ಬಳಿ ಖಾಸಗಿ ಜಮೀನಿನಲ್ಲಿ ನೆಲೆಸಿರುವವರು ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರೇ ಎಂಬ ಕುರಿತು ಹಾಗೂ ಸ್ಥಳೀಯರ ಆ ನಿರಾಶ್ರಿತರ ಬಗ್ಗೆ ನೀಡಿರುವ ದೂರುಗಳ ಬಗ್ಗೆ ತನಿಖೆ ನಡಿಸಿ ಮೂರ್‍ನಾಲ್ಕು ದಿನದಲ್ಲಿ ವರದಿ ಕೊಡುವಂತೆ ಮಹದೇವಪುರ ವಲಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಆನಂತರ ಸರ್ಕಾರದ ಜತೆಗೆ ಚರ್ಚಿಸಿ ತೆರವು ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯ ಸ್ಥಾಯಿ ಸಮಿತಿಗಳ ಚುನಾವಣೆಯ ಒತ್ತಡದಲ್ಲಿದ್ದು, ಮುಂದಿನ 2 -3 ದಿನಗಳಲ್ಲಿ ಆ ಸ್ಥಳಕ್ಕೆ ಉಪಮುಖ್ಯಮಂತ್ರಿ ಹಾಗೂ ಆಯುಕ್ತರೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.