ಜೇವರ್ಗಿ: ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ಪಟ್ಟಣದ ಸೌಂದರ್ಯೀಕರಣಕ್ಕೆ ಕೋಟ್ಯಂತರ ರೂ.ಅನುದಾನ ಒದಗಿಸಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ಪಟ್ಟಣದ ಹೃದಯಭಾಗದಲ್ಲಿರುವ ರಂಗ ಮಂದಿರದ ಬಳಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 50 ಲಕ್ಷ ರೂ. ಅನುದಾನದಲ್ಲಿ ಸುತ್ತು ಗೋಡೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದ ಡಾ| ಬಿ.ಆರ್.ಅಂಬೇಡ್ಕರ್ ಭವನ, ತಾಲೂಕು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಶಾಪಿಂಗ್ ಕಾಂಪ್ಲೆಕ್ಸ್, ಕೆರೆ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಪಟ್ಟಣದಲ್ಲಿ 19 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಫುಟಪಾತ್, ಚರಂಡಿ ಹಾಗೂ ಬೀದಿ ದೀಪ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬರುವ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಂಗಮಂದಿರದ ಪೀಠೊಪಕರಣಕ್ಕೆ ಕೆಕೆಆರ್‌ಡಿಬಿ ವತಿಯಿಂದ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ಗೋಡೆ, ಕುರ್ಚಿ ಹಾಗೂ ಮೂರು ಕೋಣೆಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗುವುದು. ಪಟ್ಟಣದ ಜನತೆ ರಂಗಮಂದಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ರಾಜಶೇಖರ ಸೀರಿ, ಷಣ್ಮುಖಪ್ಪ ಹಿರೇಗೌಡ, ಕಾಶಿರಾಯಗೌಡ ಯಲಗೋಡ, ಮಲ್ಲಣ್ಣ ಕೊಡಚಿ, ಶಿವಕುಮಾರ ಕಲ್ಲಾ, ರವಿ ಕೋಳಕೂರ, ಶ್ರೀಮಂತ ಧನ್ನಕರ್, ಶರಣು ಗುಂಡಾಪೂರ, ಅಜ್ಜು ಲಕ³ತಿ, ಬಸಣ್ಣ ಸರಕಾರ, ಮಹಿಬೂಬಸಾಬ್ ಚನ್ನೂರ, ಬಸೀರ್‌ಸಾಬ ಇನಾಂದಾರ, ವಿಶ್ವರಾಧ್ಯ ಗಂವ್ಹಾರ, ಮಹಿಮೂದ್ ನೂರಿ, ಸಲಿಂ ಕಣ್ಣಿ, ಶರಣಬಸಪ್ಪ ರೇವನೂರ, ವೆಂಕಯ್ಯ ಗುತ್ತೇದಾರ, ಮರೆಪ್ಪ ಸರಡಗಿ, ಇಂಜಿನಿಯರ್ ಧನರಾಜ ಚೌಹಾಣ, ಆಸೀಫ್ ಮತ್ತಿತರರು ಇದ್ದರು.