ಸುರಪುರ: ಪಟ್ಟಣದ ದೋಬಿಗಲ್ಲಿಯಲ್ಲಿ ಚರಂಡಿ, ರಸ್ತೆ, ಬೀದಿದೀಪ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ ಎಂದು ಆರೋಪಿಸಿ ವಾರ್ಡ್‌ನ ಸಾರ್ವಜನಿಕರು ಬುಧವಾರ ನಗರಸಭೆ ಕಾರ್ಯಾಲಯ ಎದುರು ಪ್ರತಿಭಟಿಸಿದರು.
ಮುಖಂಡ ಸಂಗನಗೌಡ ಮಾಲಿಪಾಟೀಲ ಮಾತನಾಡಿ, ವಾರ್ಡ್‌ನಲ್ಲಿ ಚರಂಡಿಗಳು ಹೂಳು ತುಂಬಿದ್ದು, ನೀರು ಮನೆಗಳಿಗೆ ನುಗ್ಗುತ್ತಿದೆ. ಒಂದೂ ಬೀದಿ ದೀಪಗಳಿಲ್ಲ. ವಾರ್ಡ್ ಕತ್ತಲಿನಿಂದ ಕೂಡಿದೆ. ಹಾವು ಚೇಳು ಹರಿದಾಡುತ್ತಿವೆ. ಈ ಕುರಿತು ಅನೇಕ ಬಾರಿ ತಿಳಿಸಿದ್ದರೂ ನಗರಸಭೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಕಸಕಡ್ಡಿ ಬಿದ್ದಿದ್ದು, ತಿಂಗಳಿಂದ ಘನತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಕಸದರಾಶಿ ಗಬ್ಬೆದ್ದು ನಾರುತ್ತಿದೆ. ವಾರ್ಡ್ ಸದಸ್ಯರೆ ಅಧ್ಯಕ್ಷರಿದ್ದಾರೆ. ಕರ್ಮಚಾರಿಗಳು ಅಧ್ಯಕ್ಷರ ಮನೆ ಮುಂದೆ ಮಾತ್ರ ಸ್ವತ್ಛಗೊಳಿಸುತ್ತಾರೆ. ಉಳಿದೆಡೆ ಕಸ ಕೂಡಾ ಬಳಿಯುತ್ತಿಲ್ಲ. ಕಳಪೆ ಗುಣಮಟ್ಟದ ಬಲ್ಬ್ಗಳನ್ನು ಹಾಕುತ್ತಿರುವುದರಿಂದ ಎರಡೆ ದಿನಗಳಲ್ಲಿ ಬಲ್ಬ್ಗಳು ಸುಟ್ಟುಹೋಗುತ್ತಿವೆ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗುತ್ತಿಲ್ಲ ಎಂದು ದೂರಿದರು.
ಮಳೆಗಾಲವಿದ್ದರೂ ವಾರ್ಡ್ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ತಿಂಗಳು ಗಟ್ಟಲೆ ನೀರು ಬರುವುದಿಲ್ಲ. ವಾರ್ಡ್ ಬೆಟ್ಟದ ಮೇಲಿರುವುದರಿಂದ ಮಳೆ ನೀರಿನಿಂದ ರಸ್ತೆಗಳು ಕೊಚ್ಚಿಹೋಗಿವೆ. ನಗರಸಭೆಯವರು ಮುರಂ ಹಾಕ್ಕಿ ರಸ್ತೆ ಸರಿಪಡಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತು ಹೋಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾರದೊಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಕಾರ್ಯಾಲಯಕ್ಕೆ ಮುಳ್ಳುಬೇಲಿ ಹಚ್ಚಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಗರ ಕೋಶಾಧಿಕಾರಿಗೆ ಬರೆದ ಮನವಿಯನ್ನು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿಗೆ ಸಲ್ಲಿಸಿದರು. ಪ್ರಮುಖರಾದ ಉದಯಕುಮಾರ, ಪ್ರಕಾಶ ಹೂಗಾರ, ಚಂದ್ರಶೇಖರ ಗೋಗಿ, ಸಾಬಣ್ಣ ಮಡಿವಾಳ, ಸಚಿನ್ ನಾಯಕ, ಪ್ರಕಾಶ ಹಳ್ಳಿಗಿಡ, ಮೌನೇಶ ಕಟ್ಟಿಮನಿ, ರವಿಕುಮಾರ ಮಡಿವಾಳ, ಪ್ರಜ್ವಲ ಕಟ್ಟಿಮನಿ, ಪವನಗೋಗಿ, ಆನಂದ ಮಡಿವಾಳ, ಮುತ್ತುಗೌಡ ಸಂತೋಷ ಮಡಿವಾಳ, ಭರತ ಮಡಿವಾಳ, ರಾಜಶೇಖರ ಮೇಟಿ, ರಿಯಾಜ್‌ಶೇಖ್, ಗುರು ಮಡಿವಾಳ, ಚಂದ್ರಶೇಖರ ಮಡಿವಾಳ ಇತರರಿದ್ದರು.