ಕಲಬುರಗಿ: ಹಿಂದಿನ ಸರ್ಕಾರ ಮಾಡಿರುವ ಸಾಲ ಮನ್ನಾ ಮೊತ್ತದಷ್ಟೇ ಹೊಸ ಸಾಲ ವಿತರಿಸುವಂತೆ ಕಲ್ಯಾಣ ಕರ್ನಾಟಕ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು.
ಸಾಲ ಮನ್ನಾವಾದ ರೈತರಿಗೆ ಸಮರ್ಪಕ ಸಾಲ ಹಂಚುತ್ತಿಲ್ಲ. ಕೆಲವೊಂದು ತಾಲೂಕುಗಳಿಗೆ ನೂರಾರು ಕೋಟಿ ರೂ. ಸಾಲ ಹಂಚಿಕೆ ಮಾಡಿದರೆ, ಇನ್ನು ಕೆಲವೊಂದು ತಾಲೂಕಿಗೆ ಕೇವಲ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಸಮರ್ಪಕವಾಗಿ ಸಾಲ ವಿತರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಕೇಲ್ ಆಫ್ ಫೈನಾನ್ಸ್ ಪ್ರಕಾರ ಸಾಲ ವಿತರಿಸುತ್ತಿಲ್ಲ. ಆಳಂದ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಲಕ್ಷ್ಮಣ ಪವಾರ ಕೋಟ್ಯಂತರ ರೂ. ಅವ್ಯವಹಾರ ಎಸಗಿದ್ದು, ಆಡಳಿತ ಮಂಡಳಿಯವರು ಹಾಗೂ ಬ್ಯಾಂಕ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.
ಸಾಲ ಹಂಚಿಕೆಯಲ್ಲಿ ಅಸಮಾನತೆ, ಹಗರಣ ಎಸಗಿದ ಅಧಿಕಾರಿಯಿಂದ ಹಣ ವಸೂಲಾತಿ ಮಾಡದಿರುವುದು, ಕಟ್ಟಡ ಕಾಮಗಾರಿಗೆ ಪಡೆದ ಹಣ ಬಳಕೆ ಸೇರಿದಂತೆ ಇತರ ನಿಟ್ಟಿನಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ ಪಾಟೀಲ ಯತ್ನಾಳ, ಶೌಕತ್ ಅಲಿ ಆಲೂರ, ಬಸವರಾಜ ಬೂದಿಹಾಳ, ಹಣಮಂತರಾಯ ಹೂಗಾರ, ಶರಣಪ್ಪ ದೊಡ್ಡಮನಿ, ಬಸಣ್ಣ ಕೊಳಕೂರ ಮುಂತಾದವರಿದ್ದರು.