ಬೆಳ್ತಂಗಡಿ: ವಿದ್ಯಾರ್ಥಿಗಳು ಹೆತ್ತವರ, ಸಮಾಜದ ಋಣವನ್ನು ಅರಿತು ಕೊಂಡು ನಮ್ಮೊಳಗಿನ ಗೋಡೆಗಳನ್ನು ದೂರ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಮೌಲ್ಯಗಳ ಮೂಲಕ ಸಮಗ್ರ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರವಿಕಾಂತೇಗೌಡ ಹೇಳಿದರು. ಅವರು ಶನಿವಾರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮಾದರಿ ಜೀವನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಹೃದಯವಂತಿಕೆಯ ಮೂಲಕ ಜೀವನ ರೂಪಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಅಂತಃ ಸತ್ವವನ್ನು ಕಳೆದುಕೊಳ್ಳದೆ ಮಾದರಿ ಜೀವನ ನಡೆಸಬೇಕಿದೆ ಎಂದರು. ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ರ್‍ಯಾಂಕ್ ವಿಜೇತರನ್ನು ಗೌರವಿಸಲಾಯಿತು. ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ರಿಜಿಸ್ಟ್ರಾರ್ ಡಾ| ಸಂಪತ್‌ಕುಮಾರ್, ರಿಜಿಸ್ಟ್ರಾರ್ (ಪರೀಕ್ಷಾಂಗ) ಪ್ರೊ| ಶಾಂತಿ ಪ್ರಕಾಶ್, ವಿವಿಧ ವಿಭಾಗದ ಡೀನ್‌ಗಳಾದ ಡಾ| ಜಯಕುಮಾರ್ ಶೆಟ್ಟಿ, ಡಾ| ಉದಯ ಕುಮಾರ್, ಡಾ| ಪ್ರಕಾಶ್ ಪ್ರಭು ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಟಿ.ಎನ್. ಕೇಶವ ಅವರು ಪ್ರಸ್ತಾವಿಸಿ, ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ| ಸತೀಶ್ಚಂದ್ರ ಅತಿಥಿಗಳನ್ನು ಪರಿಚಯಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಪ್ರೊ| ಬಿ. ಗಣಪಯ್ಯ ವಂದಿಸಿದರು. ಚಿತ್ರಾ ಶೈಲೇಶ್, ಅನನ್ಯಾ ಕಾರ್ಯಕ್ರಮ ನಿರೂಪಿಸಿದರು.
ಮಾನವೀಯ ಮೌಲ್ಯಗಳಿರಲಿ
ಯಶಸ್ಸು ಗಳಿಸುವುದೆಂದರೆ ಹಣ, ಪ್ರತಿಷ್ಠೆ, ಸ್ಥಾನಮಾನವೇ ಪರಮ ಗುರಿಯಾಗಬಾರದು. ಅದರ ಜತೆಗೆ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂಬುದರ ಸಂಕೇತವಾಗಿದೆ. ಮೌಲ್ಯಯುತ ಶಿಕ್ಷಣದಲ್ಲಿ ಎಸ್ ಡಿಎಂ ಸಂಸ್ಥೆಗಳು ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿವೆ.
-ಡಾ| ರವಿಕಾಂತೇಗೌಡ
ದ.ಕ. ಎಸ್.ಪಿ.