Advertisement

ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ

05:41 PM Jun 02, 2022 | Team Udayavani |

ಚಾಮರಾಜನಗರ: ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ.ಗಾಯತ್ರಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.

Advertisement

ದೊಡ್ಡಕೆರೆ ಕಲ್ಯಾಣಿ ಒಳಚರಂಡಿ ಯೋಜನೆಯ ಸಂಸ್ಕರಣಾ ಘಟಕ, ಜಡೇಕಲ್ಲು ದೇಗುಲದ ಮುಂಭಾಗದ ಪಾರ್ಕಿಂಗ್‌ ಕಾಮಗಾರಿ ವೀಕ್ಷಿಸಿ ಅಗತ್ಯ ಸೂಚನೆ ನೀಡಿದರು. ಅಂತರ ಗಂಗೆಯ ಕಲ್ಯಾಣಿ, ಹೆಲಿಪ್ಯಾಡ್‌ ನ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ ಪರಿಶೀಲನೆ ಮಾಡಿದರು. ದೀಪದಗಿರಿ ಒಡ್ಡುವಿನಲ್ಲಿ ನಿರ್ಮಾಣವಾಗುತ್ತಿರುವ 108 ಅಡಿಯ ಮಹದೇಶ್ವರ ಪ್ರತಿಮೆ ಕಾಮಗಾರಿ ಸೇರಿದಂತೆ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ಇತರೆ ಅಭಿವೃದ್ಧಿ ಕೆಲಸ ಪರಿಶೀಲಿಸಿದ ಗಾಯತ್ರಿ ಅವರು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿ: ಮಹದೇಶ್ವರ ಬೆಟ್ಟವು ಪವಿತ್ರ ಸ್ಥಳವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಲಿರುವುದರಿಂದ ಕಲ್ಯಾಣಿ ಅಂತರಗಂಗೆ ಮತ್ತು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಭಕ್ತಾದಿಗಳು ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು.

ಜೂನ್‌ 5 ವಿಶ್ವ ಪರಿಸರ ದಿನವಾಗಿರುವುದರಿಂದ ಅಂದು ಗ್ರಾಮ ಪಂಚಾಯಿತಿ ಮತ್ತು ಪ್ರಾಧಿಕಾರದ ವತಿಯಿಂದ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸುವಂತೆ ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ನರೇಗಾ, ಸ್ವಚ್ಛಭಾರತ್‌ ಮಿಷನ್‌ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದರು.

ಕಾರ್ಯಸೂಚಿಗಳ ಪಟ್ಟಿ ತಯಾರಿಸಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಗ್ರಾಮಗಳ ಶಾಲೆಗಳ ವಿವರ, ಮಹಿಳಾ ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾಗಿರುವ ಕಾರ್ಯಸೂಚಿಗಳ ಪಟ್ಟಿ ತಯಾರಿಸುವಂತೆ ನಿರ್ದೇಶನ ನೀಡಿದರು.

Advertisement

ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಗಿರಿಜನರು ಹೆಚ್ಚಾಗಿ ವಾಸವಿದ್ದು, ಇವರಿಗೆ ಎನ್‌.ಆರ್‌.ಎಲ್ .ಎಂ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳನ್ನು ರಚಿಸಿ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಒದಗಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ
ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಆಣೆಹೊಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗೂ ಮೂಲಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್‌ ಹಾಗೂ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next