Advertisement

ನಿಗದಿತ ಸಮಯದಲ್ಲಿ ಕಾರ್ಯ ಮುಗಿಸಿ: ಶಶಿಧರ್‌

10:17 PM Oct 25, 2019 | Lakshmi GovindaRaju |

ದೊಡ್ಡಬಳ್ಳಾಪುರ: ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ವತಿಯಿಂದ ಸಿದ್ಧಪಡಿಸಲಾಗಿರುವ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಅ.31ರ ಒಳಗೆ ಅಂತಿಮಗೊಳಿಸಬೇಕಿದ್ದು, ದೀಪಾವಳಿಗೆ ರಜೆ ಮಾಡದೆ ಕೆಲಸ ಮಾಡಿ. ಇಲ್ಲವಾದರೆ ಹಣ ಸರ್ಕಾರಕ್ಕೆ ವಾಪಸ್ಸು ಹೋಗಲಿದೆ ಎಂದು ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್‌ ಹೇಳಿದರು.

Advertisement

ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾಮಗಾರಿಯ ಹಣ ನಿಗದಿತ ಅವದಿಯಲ್ಲಿ ಖರ್ಚಾಗದೆ, ಸರ್ಕಾರಕ್ಕೆ ಹಿಂದಕ್ಕೆ ಹೋದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ತಾಲೂಕಿನಲ್ಲಿ ಕೆಆರ್‌ ಡಿಎಲ್‌ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಕುಡಿಯುವ ನೀರಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗುವುದು. ಇವುಗಳ ದುರಸ್ಥಿಗೆ ಹಣವನ್ನು ಸಹ ಮಂಜೂರು ಮಾಡಲಾಗುವುದು ಎಂದರು.

ಹಾದ್ರಿಪುರದಲ್ಲಿ ಗ್ರಾಮ ವಿಕಾಸ ಯೋಜನೆಯಲ್ಲಿ ಹಣ ಬಿಡುಗಡೆಯಾಗಿ, ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದ್ದರೂ, ಗುತ್ತಿಗೆದಾರರು ಕಾಮಗಾರಿ ಆರಂಭಿಸಿಲ್ಲ. ಒಂದು ವಾರದ ಒಳಗೆ ಕೆಲಸ ಪ್ರಾರಂಭವಾಗದಿದ್ದರೆ ಗುತ್ತಿಗೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಿಥಿಲವಾಗಿರುವ ಹಾಗೂ ಅಂಗನವಾಡಿ ಕಟ್ಟಡಗಳು ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಶಾಲಾ ಕಟ್ಟಡಗಳನ್ನು ಬಳಸಿಕೊಳ್ಳಬೇಕು ಎಂದರು.

ಸದಸ್ಯ ಜಿ.ಶಂಕರಪ್ಪ ಮಾತನಾಡಿ, ಸರ್ಕಾರದ ಎಲ್ಲಾ ಇಲಾಖೆಗಳ ಸಬ್ಸಿಡಿ ಸೇರಿದಂತೆ ಅನುದಾನಗಳು ಆನ್‌ಲೈ ನ್‌ ಮೂಲಕ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಆದರೆ ಪಶು ಸಂಗೋಪನೆ ಇಲಾಖೆಯಲ್ಲಿ ಮಾತ್ರ ಇನ್ನು ಚೆಕ್‌ ಬರೆಯಬೇಕು ಎನ್ನುತ್ತಲೇ ಕಾಲ ಕಳೆಯಲಾಗುತ್ತಿದೆ ವಿನಃ ಫಲಾನುಭವಿಗಳಿಗೆ ಹಣ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಪಶು ಭಾಗ್ಯ ಯೋಜನೆಯಲ್ಲಿ ಅರ್ಹ ಫಲಾನುಭವಗಳನ್ನು ಆಯ್ಕೆ ಮಾಡಿ ಬ್ಯಾಂಕ್‌ಳಿಗೆ ಕಳುಹಿಸಿದರು ಸಹ ಸಾಲ ನೀಡಿಲ್ಲ. ಸಬ್ಸಿಡಿ ಹಣ ಮಾತ್ರ ಬ್ಯಾಂಕ್‌ಗೆ ಜಮೆ ಆಗಿದೆ. ಪಶುಭಾಗ್ಯ ಫಲಾನುಭವಿಗಳಿಗೆ ಸಬ್ಸಿಡಿ ಹಣ ದೊರೆಯದೆ ಸರ್ಕಾರಕ್ಕೆ ಹಿಂದಕ್ಕೆ ಹೋದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸದಸ್ಯ ಕಣಿವೆಪುರ ಸುನಿಲ್‌ಕುಮಾರ್‌ ಮಾತನಾಡಿ, ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡಲಾಗುತ್ತಿದೆ.ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇಬ್ಬರು ಮಾತ್ರ ಮೇಲುಸ್ತುವಾರಿ ಅಧಿಕಾರಿಗಳು ಇದ್ದು, ಇಲಾಖೆಯ ಕೆಲಸಗಳು ಕುಂಠಿತವಾಗಿವೆ ಎಂದರು.

Advertisement

ಅಧಿಕಾರಿಗಳ ಗೈರಿಗೆ ಗರಂ ಆದ ಸದಸ್ಯರು: ಸಭೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಬಂದು ಮಾಹಿತಿ ನೀಡದೆ, ಅಪೂರ್ಣ ಮಾಹಿತಿಯೊಂದಿಗೆ ಕೆಳ ಹಂತದ ಅಧಿಕಾರಿಗಳನ್ನು ಸಭೆಗೆ ಕಳುಹಿಸುವುದರ ವಿರುದ್ಧ ಗರಂ ಆದ ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್‌, ಸದಸ್ಯರಾದ ಹಸನ್‌ಘಟ್ಟ ರವಿ, ಜಿ.ಶಂಕರಪ್ಪ, ಕಣಿವೇಪುರ ಸುನಿಲ್,ಎಚ್‌.ವಿ.ಶ್ರೀವತ್ಸ, ಚಿಕ್ಕಆಂಜಿನಪ್ಪ, ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಗರಂ ಆಗಿ ಅಧಿಕಾರಿಗಳೆ ಇಲ್ಲದ ಮೇಲೆ ಸಭೆ ನಡೆಸಿ ಏನು ಪ್ರಯೋಜನೆ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ನಿರ್ಣಯ ಅಂಗೀಕರಿಸಲಾಯಿತು.

ಬಸವ ವಸತಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಫಲಾನುಭವಿಗಳ ಪಟ್ಟಿ ಅಂಗಿಕೃತವಾಗಿದೆ. ಹಲವಾರು ಜನ ಫಲಾನುಭವಿಗಳು ಸರ್ಕಾರದಿಂದ ಹಣ ಬರುತ್ತದೆ ಎನ್ನುವ ನಂಬಿಕೆ ಮೇಲೆ ಸಾಲ ಮಾಡಿ ಮನೆಗಳನ್ನು ಕಟ್ಟಿಸಿದ್ದಾರೆ. ಬಹುತೇಕ ಮನೆಗಳ ಕೆಲಸ ಅರ್ಧಕ್ಕೆ ನಿಂತಿದೆ. ಆದರೆ ಸರ್ಕಾರದಿಂದ ಹಣ ಮಾತ್ರ ಬರುತ್ತಿಲ್ಲ. ಫಲಾನುಭವಿಗಳು ಹಣ ಯಾವಾಗ ಬರುತ್ತದೆ ಎಂದು ಕೇಳುತ್ತ ಸದಸ್ಯರ ಮನೆಗಳ ಬಳಿಗೆ ಬಂದರೆ ಉತ್ತರ ಹೇಳಲಾಗದೆ ತಪ್ಪಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮ ಸಭೆಗಳಲ್ಲೂ ಉತ್ತರ ಹೇಳುವುದೇ ಕಷ್ಟವಾಗಿದೆ. ಈ ಬಗ್ಗೆ ವಸತಿ ಸಚಿವರಿಗೆ ಪತ್ರ ಬರೆದು ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು. ಸದಸ್ಯೆ ಮುತ್ತುಲಕ್ಷ್ಮಿ ವೆಂಕಟೇಶ್‌ ಮಾತನಾಡಿ,ಆರೂಢಿ ಹಾಗೂ ಬನವತಿಯಲ್ಲಿ ಅಂಗನವಾಡಿ ಅಡುಗೆ ಸಿಬ್ಬಂದಿ ಇಲ್ಲದೆ ಬಹಳ ತೊಂದರೆಯಾಗಿದ್ದು ಸಿಬ್ಬಂದಿ ನೇಮಿಸಲು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next