Advertisement

ಡಿಸೆಂಬರ್‌ ಒಳಗೆ ಕಾಮಗಾರಿ ಮುಗಿಸಿ 

12:58 PM Oct 31, 2017 | Team Udayavani |

ಮೈಸೂರು: ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗುವುದರಿಂದ ಎಲ್ಲಾ ರೀತಿಯ ಕಾಮಗಾರಿ, ಟೆಂಡರ್‌ ಪ್ರಕ್ರಿಯೆಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಲಕ್ಷಿನಾರಾಯಣ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ, ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬಿಪಿಎಲ್‌ ಪಡಿತರ ಚೀಟಿ ಗಳನ್ನೂ ಡಿಸೆಂಬರ್‌ ಅಂತ್ಯದೊಳಗೆ ಅರ್ಹ ಫ‌ಲಾನುಭವಿಗಳ ಮನೆಬಾಗಿಲಿಗೆ ತಲುಪಿಸಿ, ಅರ್ಹರಲ್ಲದವರ ಅರ್ಜಿ ತಿರಸ್ಕರಿಸಿ ಎಂದರು.

ಮಳೆಹಾನಿ: ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಶೆ.72ರಷ್ಟು ಹೆಚ್ಚು ಮಳೆಯಾಗಿದ್ದು, ಜಿಲ್ಲೆಯಲ್ಲಿ 158.30 ಹೆಕ್ಟೇರ್‌ ಬೆಳೆಹಾನಿ ಉಂಟಾಗಿದೆ. 14 ಜನರ ಜೀವ ಹಾನಿ ಆಗಿದೆ. 541 ಮನೆಗಳಿಗೆ ಹಾನಿ, 17 ಜಾನುವಾರು ಸಾವನ್ನಪ್ಪಿವೆ. ಒಟ್ಟಾರೆ 66.82 ಲಕ್ಷ ರೂ. ಹಾನಿ ಉಂಟಾಗಿದೆ ಎಂದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷಿàನಾರಾಯಣ್‌, ಮಳೆಯಿಂದ ಎಲ್ಲೆಲ್ಲಿ ಸಮಸ್ಯೆ ಉಂಟಾಗಿದೆ ಎಂಬುದರ ಪಟ್ಟಿಮಾಡಿ, ಪರಿಹಾರ ಕಾರ್ಯಗಳಿಗೆ ಮುಂದಾಗಿ ಎಂದು ಸೂಚಿಸಿದರು. 

ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ನರೇಗಾ ಯೋಜನೆಯಡಿ 3152977 ಮಾನವದಿನಗಳ ಸೃಜನೆ ಗುರಿ ನೀಡಲಾಗಿತ್ತು. ಈವರೆಗೆ 1611353 ದಿನಗಳ ಸೃಜನೆ ಮಾಡಲಾಗಿದ್ದು, ಶೇ.51ರಷ್ಟು ಗುರಿ ಸಾಧಿಸಲಾಗಿದೆ ಎಂದರು.

ವೆಚ್ಚ ಮಾಡಿಲ್ಲ: ಕುಡಿಯುವ ನೀರು ಸರಬರಾಜು ಯೋಜನೆಯಡಿ ನಗರಾಭಿವೃದ್ಧಿ ಇಲಾಖೆಯಿಂದ ಮೈಸೂರು ತಾಲೂಕಿಗೆ 333.98 ಲಕ್ಷ ರೂ. ಬಿಡುಗಡೆಯಾಗಿದ್ದರೂ ವೆಚ್ಚ ಮಾಡಿಲ್ಲ. ನಂಜನಗೂಡು ತಾಲೂಕಿಗೆ 37.49 ಲಕ್ಷ ರೂ. ಬಿಡುಗಡೆ ಮಾಡಿದ್ದರು ವೆಚ್ಚ ಮಾಡಿಲ್ಲ. ತಿ.ನರಸೀಪುರ ತಾಲೂಕಿಗೆ 32.33 ಲಕ್ಷ ರೂ. ಬಿಡುಗಡೆಯಾಗಿದ್ದರೂ ಖರ್ಚು ಮಾಡಿಲ್ಲ ಎಂದು ಲಕ್ಷಿನಾರಾಯಣ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಜಿಲ್ಲೆಯಲ್ಲಿ ಆನ್‌ಲೈನ್‌ ಮೂಲಕ ಬಿಪಿಎಲ್‌ ಪಡಿತರ ಚೀಟಿ ಕೋರಿ 1,09,753 ಅರ್ಜಿ ಸಲ್ಲಿಕೆಯಾಗಿದ್ದು 89 ಸಾವಿರ ಅರ್ಜಿ ಪರಿಶೀಲನೆ ನಡೆದಿದೆ. ಈವರೆಗೆ 32 ಸಾವಿರ ಮಂದಿಗೆ ಬಿಪಿಎಲ್‌ ಪಡಿತರ ಚೀಟಿ ತಲುಪಿಸಲಾಗಿದೆ ಎಂದು ವಿವರಿಸಿದರು.

50 ಕೋಟಿ ಬಳಸಿಕೊಳ್ಳಿ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮೈಸೂರು ನಗರಕ್ಕೆ ನೀಡಲಾಗಿರುವ 100 ಕೋಟಿ ರೂ. ವಿಶೇಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ 50 ಕೋಟಿ ರೂ. ವೆಚ್ಚ ಮಾಡಿದ್ದರೆ, ಇನ್ನೂ 50 ಕೋಟಿ ರೂ. ಬಾಕಿ ಉಳಿದಿದೆ. ನಗರಪಾಲಿಕೆ ದೇವರಾಜ ಮಾರುಕಟ್ಟೆ ಹೊಸ ಕಟ್ಟಡ ನಿರ್ಮಾಣಕ್ಕೆ ಈ ಹಣ ಬಳಸಿ, ಹೆಚ್ಚುವರಿ ಹಣದ ಅಗತ್ಯಬಿದ್ದರೆ ವಿಶೇಷ ಅನುದಾನದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.  

ಜಿಲ್ಲಾಧಿಕಾರಿ ರಂದೀಪ್‌ ಡಿ., ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಪಾಲಿಕೆ ಆಯುಕ್ತ ಜಗದೀಶ್‌, ಮುಡಾ ಆಯುಕ್ತ ಕಾಂತರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

55 ರೈತರ ಆತ್ಮಹತ್ಯೆ: ಜಿಲ್ಲೆಯಲ್ಲಿ ಏ.1ರಿಂದ ಅ.15ರವರೆಗೆ ಒಟ್ಟು 55 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಈವರೆಗೆ 18 ಮಂದಿ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡಿದ್ದು, 1 ಪ್ರಕರಣ ತಿರಸ್ಕರಿಸಲಾಗಿದೆ. ಯಾವುದೇ ಕುಟುಂಬಕ್ಕೆ ಈವರೆಗೆ ಪರಿಹಾರ ನೀಡಿಲ್ಲ.

ಹುಣಸೂರು ತಾಲೂಕಿನಲ್ಲಿ 8 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಐವರಿಗೆ ಪರಿಹಾರ ನೀಡಲಾಗಿದೆ. ಕೆ.ಆರ್‌.ನಗರ ತಾಲೂಕಿನಲ್ಲಿ 16 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈವರೆಗೆ ಇಬ್ಬರಿಗೆ ಪರಿಹಾರ ನೀಡಿದೆ. ಮೈಸೂರು ತಾಲೂಕಿನಲ್ಲಿ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಎಲ್ಲಾ ಕುಟುಂಬಕ್ಕೆ ಪರಿಹಾರ ನೀಡಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 15 ರೈತರ ಪೈಕಿ 3 ಕುಟುಂಬಗಳಿಗೆ ಪರಿಹಾರ ನೀಡಿದೆ.

ನಂಜನಗೂಡು ತಾಲೂಕಿನ ನಾಲ್ವರು ರೈತರ ಪೈಕಿ ಮೂವರ ಕುಟುಂಬಕ್ಕೆ, ತಿ.ನರಸೀಪುರ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಪೈಕಿ ಒಬ್ಬರ ಕುಟುಂಬಕ್ಕೆ ಈವರೆಗೆ ಪರಿಹಾರ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next