ಕೊಪ್ಪಳ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಲ್ಲಿ ಕ್ರಿಯಾ ಯೋಜನೆಯಡಿ ಅನುಮೋದನೆಗೊಂಡ ಎಲ್ಲ ಕಾಮಗಾರಿಗಳು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್. ವೆಂಕಟೇಶ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುಮೋದನೆಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಮಗಾರಿಗೆ ಆಡಳಿತಾತ್ಮಕ ಹಾಗೂ ಕ್ರಿಯಾ ಯೋಜನೆ ಅನುಮೋದನೆ ನಂತರ ಎರಡು ವರ್ಷಗಳಲ್ಲಿ ಕಾಮಗಾರಿ ಆರಂಭವಾಗದಿದ್ದರೆ, ಆ ಕಾಮಗಾರಿ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಅದರಂತೆ ಜಿಲ್ಲೆಯಲ್ಲಿ ಅನುಮೋದನೆ ನಂತರವೂ ಇನ್ನೂ ಆರಂಭವಾಗದ, ಅನಗತ್ಯ ವಿಳಂಬವಾದ ಕಾಮಗಾರಿಗಳನ್ನು ಮಂಡಳಿಯಿಂದ ರದ್ದುಪಡಿಸಲು ಕ್ರಮ ವಹಿಸಲಾಗುವುದು. ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದರೂ ಪೂರ್ಣಗೊಳ್ಳದಿದ್ದರೆ ಅಂತಹ ಕಾಮಗಾರಿಯನ್ನು ಮಂಡಳಿಯಿಂದ ಬ್ಲಾಕ್ ಮಾಡಲಾಗುವುದು ಅಥವಾ ದಂಡ ವಿಧಿಸಲಾಗುವುದು. ದಂಡ ವಿಧಿಸಿದರೆ ಕಾಮಗಾರಿಗೆ ನಿಗದಿಪಡಿಸಿದ ಅನುದಾನದಲ್ಲಿ ನಿರ್ದಿಷ್ಟ ಮೊತ್ತ ಕಡಿತಗೊಳಿಸಲಾಗುವುದು. ಕಾಮಗಾರಿಯನ್ನು ಬ್ಲಾಕ್ ಮಾಡಿದರೆ ಕಾಮಗಾರಿ ಪೂರ್ಣಗೊಳಿಸಲು ನಂತರದಲ್ಲಿ ಬೇಕಾದ ಅನುದಾನವನ್ನು ಸಂಬಂಧಿಸಿದ ಇಲಾಖೆಯಿಂದಲೇ ಭರಿಸಬೇಕು. ಇವೆರಡೂ ಸಂಭವಿಸಬಾರದು ಎಂದಾದರೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ. ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡಬೇಡಿ ಎಂದರು.
2021-22ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅಂತಿಮ ಕ್ರಿಯಾ ಯೋಜನೆ ಅನುಮೋದನೆಗೊಂಡ ನಂತರ 15 ದಿನಗಳ ಕಾಲವಕಾಶ ನೀಡಲಾಗುತ್ತದೆ. ಈ ಅವ ಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿರುವ ಎಲ್ಲ ಅಂಶಗಳು ಪೂರಕವಾಗಿರುವ ಬಗ್ಗೆ ಅಥವಾ ಕಾಮಗಾರಿಗೆ ಅಡಚಣೆ ಉಂಟು ಮಾಡಬಲ್ಲ ಅಂಶಗಳ ಬಗ್ಗೆ ಪರಿಶೀಲಿಸಿ, ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಚರ್ಚಿಸಿ, ಬದಲಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಬಹುದು. 15 ದಿನಗಳ ನಂತರ ಬರುವ ಬದಲಿ ಕಾಮಗಾರಿ ಕುರಿತ ಯಾವುದೇ ಪ್ರಸ್ತಾವನೆಗಳನ್ನು ಪರಿಗಣಿಸಲ್ಲ. ಈ ವರ್ಷದಿಂದಲೇ ಈ ನಿಯಮ ಜಾರಿಗೆ ಬರುತ್ತಿದ್ದು, ಕೆಲಸದ ಆದೇಶ(ವರ್ಕ್ ಆರ್ಡರ್)ದ ದಿನಾಂಕದಿಂದ ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ ದಿನಾಂಕದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಅನುಷ್ಠಾನ ಏಜೆನ್ಸಿಗಳಿಗೆ ಹೆಚ್ಚು ಕಾಮಗಾರಿಗಳಿದ್ದರೆ, ತಮ್ಮಿಂದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದಿದ್ದರೆ ಡಿಸಿ ಅಥವಾ ಜಿಪಂ ಸಿಇಒಗೆ ಮನವಿ ಸಲ್ಲಿಸಬಹುದು. ಆದರೆ ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ, ಕಳಪೆ ಕಾಮಗಾರಿ ಮಾಡುವಂತಿಲ್ಲ ಎಂದು ಅವರು ಅನುಷ್ಠಾನ ಏಜೆನ್ಸಿಗಳಿಗೆ ಸೂಚಿಸಿದರು.
ಮಂಡಳಿಯಿಂದ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿ ಯಲ್ಲಿ ಸಮರ್ಪಕವಾಗಿ ಬಳಸಿ ಮಂಡಳಿಯ ನಿರ್ದೇಶನಗಳನ್ನು ಗಂಭೀರವಾಗಿ ಪರಿಗಣಿಸಿ. ಕಾಮಗಾರಿಯ ವಿವರಗಳನ್ನು ಮಂಡಳಿಯ ವೆಬ್ ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಿ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಒ ಬಿ ಫೌಜಿಯಾ ತರನ್ನುಮ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ನಿರ್ದೇಶಕ ಸೂರ್ಯಕಾಂತ ನಾವಿ, ಹಣಕಾಸು ನಿಯಂತ್ರಕ ರಾಮಣ್ಣ ಅಥಣಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.