ನವಲಗುಂದ: ಧಾರವಾಡ ಹಾಗೂ ನವಲಗುಂದ ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸುವ ಬಹುದಿನದ ಕನಸು ನನಸು ಮಾಡಲು ಕೈಗೊಂಡಿರುವ ತುಪ್ಪರಿ ಹಳ್ಳದ ಸರ್ವೇ ಕಾರ್ಯ ಒಂದು ತಿಂಗಳೊಳಗೆ ಮುಕ್ತಾಯಗೊಳಿಸಿ, ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಶಿರೂರು ಗ್ರಾಮದ ಬಳಿ ಯೋಜನೆಯ ಸರ್ವೇ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ, ಏತ ನೀರಾವರಿ, ಕೆರೆ ತುಂಬುವ ಹಾಗೂ ಹಳ್ಳದ ಹರಿವಿನ ವ್ಯಾಪ್ತಿಯಲ್ಲಿ ಹೂಳು ಎತ್ತುವ ಯೋಜನೆಯ ವಿಸ್ಕೃತ ಯೋಜನಾ ವರದಿ ತಯಾರಿಸಲು ಡ್ರೋಣ್ ಹಾಗೂ ಡಿಜಿಪಿಎಸ್ ಉಪಕರಣಗಳಿಂದ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಒಂದು ತಿಂಗಳ ಅವ ಧಿಯಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡು ಸೆಪ್ಟೆಂಬರ್ ಅಂತ್ಯದೊಳಗೆ ವಿಸ್ಕೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
2017ರಲ್ಲಿ ತುಪ್ಪರಿಹಳ್ಳಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಡಿಯ ಪೊಲ್ಲಾವರಮ್ ಸ್ಕೀಮ್‌ನಡಿ ಧಾರವಾಡ ಹಾಗೂ ನವಲಗುಂದ ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಕಲ್ಪಿಸಲು 1 ಟಿಎಂಸಿ ಅಡಿ ನೀರಿನ ಹಂಚಿಕೆಯಾಗಿದೆ. ನೀರಿನ ಸದ್ಬಳಕೆಗೆ ಏತ ನೀರಾವರಿ ಯೋಜನೆ, ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಹಾಗೂ ಕೆರೆ ತುಂಬುವ ಯೋಜನೆ ಒಳಗೊಂಡ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಧಾರವಾಡ (ಗ್ರಾಮೀಣ) ಹಾಗೂ ನವಲಗುಂದ ಶಾಸಕರ ಪ್ರಯತ್ನದಿಂದಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ 50 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಡ್ರೋಣ್ ಹಾಗೂ ಡಿಜಿಪಿಎಸ್ ಉಪಕರಣಗಳಿಂದ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ಹಳ್ಳದ ನೀರಿನ ಸದ್ಬಳಕೆಗೆ ಅಂದಾಜು 400 ಕೋಟಿ ರೂ. ಯೋಜನೆಯನ್ನು ರೂಪಿಸಲು ಶಕ್ಯತಾ ವರದಿ ತಯಾರಿಸಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ಮಲಪ್ರಭಾ ಬಲದಂಡೆ ಯೋಜನೆ ಅಧಿಧೀಕ್ಷಕ ಎಂಜಿನಿಯರ್ ರಾಜೇಶ ಅಮ್ಮಿನಭಾವಿ, ಕಾರ್ಯನಿರ್ವಾಹಕ ಎಂಜಿನಿಯರ್ ಅರವಿಂದ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಾಲಗಾರ, ಎಸ್‌ಪಿ ವರ್ತಿಕಾ ಕಟಿಯಾರ್, ಡಿವೈಎಸ್ಪಿ ರವಿನಾಯ್ಕ, ತಹಶೀಲ್ದಾರ್ ನವೀನ ಹುಲ್ಲೂರ ಇದ್ದರು.
ಶೀಘ್ರ ಸರಕಾರದ ಅನುಮೋದನೆ : 2010ರಲ್ಲಿ ಬೆಣ್ಣೆ ಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಯನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾಯಿಸಿ, ನೀರಾವರಿ ತಜ್ಞರಾದ ಪರಮಶಿವಯ್ಯನವರ ನೇತೃತ್ವದಲ್ಲಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿತ್ತು. ಈ ವರದಿಯು 2012ರಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿ ಪ್ರಕಾರ 2017ರಲ್ಲಿ ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಯೋಜನಾ ವರದಿ ತಯಾರಿಸಲು ಇ.ಐ. ಟೆಕ್ನಾಲಜಿಸ್ ಬೆಂಗಳೂರು ಅವರಿಗೆ ಟೆಂಡರ್ ಮುಖಾಂತರ ವಹಿಸಲಾಗಿತ್ತು. 153 ಕೋಟಿ ರೂ.ಗಳ ವಿವರವಾದ ಯೋಜನಾ ವರದಿಯನ್ನು ಈಗಾಗಲೇ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಂದಾಜು ಪರಿಶೀಲನಾ ಸಮಿತಿಗೆ ಮಂಡಿಸಲಾಗಿದ್ದು, ಶೀಘ್ರವಾಗಿ ಸರಕಾರದ ಅನುಮೋದನೆ ಪಡೆಯಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು.