Advertisement

ಮಳೆಗಾಲ ಮುನ್ನವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

04:23 PM Aug 18, 2021 | Team Udayavani |

ಹಾವೇರಿ: ಮುಂದಿನ ಮಳೆಗಾಲಕ್ಕೆ ಮುನ್ನವೇ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಸೇವಾ ರಸ್ತೆಗಳ ನಿರ್ಮಾಣದ ಶಾಶ್ವತ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತಂತೆ ನಡೆದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಛತ್ರ ಮತ್ತು ಮೋಟೆಬೆನ್ನೂರ ಸೇವಾ ರಸ್ತೆಗಳ ನಿರ್ಮಾಣ ಕಾಮಗಾರಿ ಎರಡು ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು. ಉಳಿದಂತೆ ಹೆದ್ದಾರಿ ಮಾರ್ಗದಲ್ಲಿ ಬರುವ ಜಿಲ್ಲೆಯ ಎಲ್ಲ ಸೇವಾ ರಸ್ತೆಗಳು, ಸೇತುವೆಗಳ ಶಾಶ್ವತ ಕಾಮಗಾರಿಯನ್ನು ಮುಂದಿನ ಒಂಬತ್ತು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಗಡುವು ನೀಡಿದರು.

ಹೆದ್ದಾರಿಗೆ ಸಂಬಂಸಿದ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ರೈತರಿಗೆ, ಸ್ಥಳೀಯ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಪ್ರಾಧಿಕಾರಕ್ಕೆ ವಿಳಂಬವಿಲ್ಲದೆ ವರ್ಗಾಯಿಸಬೇಕು. ರೈತರಿಗೆ ಪರಿಹಾರ ಪಾವತಿಗಾಗಿ ಅನುಕೂಲವಾಗುವಂತೆ ರಾಣಿಬೆನ್ನೂರ, ಬ್ಯಾಡಗಿ, ಹಾವೇರಿಯಲ್ಲಿ ಭೂಸ್ವಾಧೀನ ಅಧಿಕಾರಿಗಳು ಪ್ರತಿ ಬುಧವಾರ ಉಪಸ್ಥಿತರಿದ್ದು ಕ್ರಮ ವಹಿಸಬೇಕು. ಭೂಸ್ವಾಧಿಧೀನಕ್ಕೆ ಸಂಬಂಧಿಸಿದ ರೈತರ ಕುಂದುಕೊರತೆ ನಿವಾರಿಸಲು
ಎಲ್ಲ ತಹಶೀಲ್ದಾರ್‌ಗಳ ಕಚೇರಿಗಳಲ್ಲಿ ಕೌಂಟರ್‌ ತೆರೆದು ಅರ್ಜಿಗಳನ್ನು ಸ್ವೀಕರಿಸಿ ಕುಂದುಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಮಾರ್ಗದಲ್ಲಿ ಸಂಚಾರಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕೆಂದು ಸೂಚನೆ ನೀಡಿದರು.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ : ಆಗಸ್ಟ್ 23 ರಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭ

Advertisement

ಭೂಸ್ವಾಧೀನ ಪರಿಹಾರ, ಸೇವಾ ರಸ್ತೆ ಹಾಗೂ ಅಂಡರ್‌ ಪಾಸ್‌ಗಳ ನಿರ್ಮಾಣಗಳಲ್ಲಿ ಉಂಟಾಗಿರುವ ಲೋಪಗಳು, ಸಾರ್ವಜನಿಕ ಸಮಸ್ಯೆಗಳ ಕುರಿತಂತೆ ಶಾಸಕರು, ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದರು. ಸೇವಾ ರಸ್ತೆಗಳ ನಿರ್ಮಾಣ ಕಾಮಗಾರಿಗಳ ಕುರಿತಂತೆ ಹೆದ್ದಾರಿ ಪ್ರಾ ಧಿಕಾರದ ಚಿತ್ರದುರ್ಗ ವಿಭಾಗದ ಯೋಜನಾ ನಿರ್ದೇಶಕ ಬಿ.ಶ್ರೀನಿವಾಸಲು ನಾಯ್ಡು ಮಾತನಾಡಿ, ದಾವಣಗೆರೆ ಯಿಂದ ಹಾವೇರಿ ವರೆಗಿನ ಹೆದ್ದಾರಿ ಮಾರ್ಗದದಲ್ಲಿ 120 ಕಿ.ಮೀ. ಸೇವಾ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು, ಈಗಾಗಲೇ 90 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. ಬಾಕಿ 30 ಕಿ.ಮೀ.ರಸ್ತೆ ನಿರ್ಮಾಣ ಮಾಡಬೇಕಾಗಿದೆ. 140 ಕೋಟಿ ವೆಚ್ಚದಲ್ಲಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಶಾಶ್ವತ ಸೇವಾ ರಸ್ತೆ ನಿರ್ಮಾಣ ಕಾಮಗಾರಿಯನ್ನು ಒಂಬತ್ತು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ರೈತರು ಛತ್ರ, ಮೋಟೆಬೆನ್ನೂರ, ದೇವಿಹೊಸೂರ, ಕೆರೆಮತ್ತಿಹಳ್ಳಿ ಕೆಳಸೇತುವೆ ಸೇವಾ ರಸ್ತೆಗಳ ನಿರ್ಮಾಣ, ಪದೇ ಪದೆ ಅಪಘಾತ ಸಂಭವಿಸುವ ಹೆದ್ದಾರಿ ಮಾರ್ಗದ ಕರ್ಲಗೇರಿ ಗ್ರಾಮದ ಸೇತುವೆ ಬಳಿ ನ್ಯೂನತೆ ಸರಿಪಡಿಸುವುದು, ಛತ್ರದ ಬಳಿ ಅಂಡರ್‌ ಪಾಸ್‌ ನಿರ್ಮಾಣ, ಮೋಟೆಬೆನ್ನೂರ ಬಳಿ ಪೊಲೀಸ್‌ ಔಟ್‌ಪೋಸ್ಟ್‌ ಸ್ಥಾಪನೆ, ಕಾಕೋಳ ಬಳಿ ಬಸ್‌ ನಿಲ್ದಾಣ ನಿರ್ಮಾಣ, ಚಳಗೇರಿ ಸೇತುವೆ ಬಳಿ ಕುಡಿಯುವ ನೀರಿನ ಪೈಪ್‌ ತೆಗೆದುಕೊಂಡು ಹೋಗಲು ಅಂಡರ್‌ ಪಾಸ್‌ ವ್ಯವಸ್ಥೆ ಅಳವಡಿಸುವುದು, ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ತೀರ್ಮಾನ ವಾದಂತೆ ಭೂಸ್ವಾ ಧೀನ ಪರಿಹಾರ ಪಾವತಿ ಮಾಡಬೇಕು. ಆರು ತಿಂಗಳೊಳಗಾಗಿ ಎಲ್ಲ ಸೇವಾ ರಸ್ತೆಗಳ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದು ಬ್ಯಾಡಗಿ ರೈತ ಮುಖಂಡ ಗಂಗಣ್ಣ ಕೆ.ಎಲಿ ಸೇರಿದಂತೆ ವಿವಿಧ ರೈತ ಮುಖಂಡರು ಮನವಿ ಮಾಡಿಕೊಂಡರು. ನಿಗದಿತ ಕಾಲಮಿತಿಯಲ್ಲಿ ಸೇವಾ ರಸ್ತೆಗಳು ಪೂರ್ಣಗೊಳ್ಳದಿದ್ದರೆ ಚಳಗೇರಿ ಹಾಗೂ ಬಂಕಾಪುರ ಟೋಲ್‌ ಬಂದ್‌ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಡಿಸಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡ ವಿಭಾಗದ ಯೋಜನಾ ನಿರ್ದೇಶಕ ಎಸ್‌.ಡಿ. ಪೋತದಾರ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ ಹಾಗೂ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್‌ಗಳು, ಹೆದ್ದಾರಿ ಪ್ರಾಧಿಕಾರದ ವಿವಿಧ ವಿಭಾಗಗಳ ಅಧಿಕಾರಿಗಳು, ಭೂಸ್ವಾಧೀನಾಧಿಕಾರಿಗಳು, ಹೆದ್ದಾರಿ ಕಾಮಗಾರಿ ನಿರ್ಮಾಣ ಗುತ್ತಿಗೆಯ ವಿವಿಧ ಕಂಪನಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಹೆದ್ದಾರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ರೈತರಿಗೆ, ಸ್ಥಳೀಯ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿದ ರೈತರ ಕುಂದುಕೊರತೆ ನಿವಾರಿಸಲು ಎಲ್ಲ
ತಹಶೀಲ್ದಾರ್‌ ಕಚೇರಿಗಳಲ್ಲಿ ಕೌಂಟರ್‌ ತೆರೆದು ಅರ್ಜಿ ಸ್ವೀಕರಿಸಿ ಕುಂದುಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಮಾರ್ಗದಲ್ಲಿ ಸಂಚಾರಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು.
-ಶಿವಕುಮಾರ ಉದಾಸಿ, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next