Advertisement

ಎಲಿವೇಟೆಡ್‌ ಕಾಮಗಾರಿ 2020ರಲ್ಲಿ ಪೂರ್ಣ

07:55 AM Jul 07, 2019 | Lakshmi GovindaRaj |

ಬೆಂಗಳೂರು: ಕೋರಮಂಗಲದ 100 ಅಡಿ ಮುಖ್ಯರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜೀಪುರ ಸಿಗ್ನಲ್‌ನಿಂದ ಕೇಂದ್ರೀಯ ಸದನ್‌ ಜಂಕ್ಷನ್‌ವರೆಗೆ ನಿರ್ಮಾಣವಾಗುತ್ತಿರುವ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿಯನ್ನು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಶನಿವಾರ ಪರಿಶೀಲಿಸಿದರು.

Advertisement

ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್‌ ಬಳಿ ನಡೆಯುತ್ತಿರುವ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, 2017ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪ್ರಾರಂಭಿಸಿದ್ದು, 214 ಕೋಟಿ ರೂ. ವೆಚ್ಚದಲ್ಲಿ 2.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 81 ಪಿಲ್ಲರ್‌ಗಳ ನಿರ್ಮಾಣ ಬಹುತೇಕ ಮುಗಿದಿದೆ.

ಮೇಲ್ಸೇತುವೆಯಲ್ಲಿ ಏಳು ಜಂಕ್ಷನ್‌ಗಳು, 4 ರ್‍ಯಾಂಪ್‌ ಮತ್ತು ರಸ್ತೆಯ ಎರಡೂ ಬದಿ ತಲಾ ಎರಡು ಪಥ ನಿರ್ಮಾಣವಾಗಲಿವೆ. ಮೇಲ್ಸೇತುವೆ ಮಾರ್ಗದಲ್ಲಿದ್ದ 39 ಮರಗಳ ಪೈಕಿ 25 ಮರಗಳನ್ನು ಸ್ಥಳಾಂತರಿಸಿದ್ದು, ಉಳಿದ ಮರಗಳ ರಂಬೆ-ಕೊಂಬೆಗಳನ್ನು ತೆರವು ಮಾಡಲಾಗುವುದು. ಮರಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮೇಲ್ಸೇತಯವೆ ಕಾಮಗಾರಿ ಮುಗಿದರೆ ಈ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದೆ. ಹೀಗಾಗಿ, ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಮೇಯರ್‌, ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌, 2020ರ ಸೆಪ್ಟೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.

“ಸರ್ಜಾಪುರ ರಸ್ತೆಯಿಂದ ಈಜೀಪುರ ಕಡೆ ಹೋಗಲು ಹೆಚ್ಚುವರಿಯಾಗಿ ಒಂದು ರ್‍ಯಾಂಪ್‌ ನಿರ್ಮಿಸಲಾಗುತ್ತಿದ್ದು, ಅದಕ್ಕೆ ಸೇಂಟ್‌ ಜಾನ್ಸ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ನಿಂದ ಜಾಗ ಪಡೆದು, ಅವರಿಗೆ ಅಭಿವೃದ್ಧಿ ಹಸ್ತಾಂತರ ಹಕ್ಕು (ಟಿಡಿಆರ್‌) ಪ್ರಮಾಣಪತ್ರ ನೀಡಲಾಗುತ್ತಿದೆ.

Advertisement

ಇನ್ನು ಸರ್ಕಾರಿ ಒಡೆತನದ 3 ಆಸ್ತಿ ಮತ್ತು ಖಾಸಗಿ ಮಾಲೀಕತ್ವದ 46 ಕಟ್ಟಗಳು ಸೇರಿ 49 ಆಸ್ತಿಗಳನ್ನು (8,599.70 ಚದರ ಮೀ.) ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಕೆಲವರು ಟಿಡಿಆರ್‌ ನೀಡುವಂತೆ ಮನವಿ ಮಾಡಿದ್ದು, ಇನ್ನು ಕೆಲವರು ನಗದು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಸಂಚಾರ ದಟ್ಟಣೆ ನಿಯಂತ್ರಣ: ಕೇಂದ್ರೀಯ ಸದನ ಜಂಕ್ಷನ್‌ ಮತ್ತು ಸೋನಿ ವರ್ಲ್ಡ್ ಜಂಕ್ಷನ್‌ಗಳ ಮೂಲಕ ಮೇಲ್ಸೇತುವೆ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್‌ ಮೂಲಕ ತಾವರೆಕೆರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್‌, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್‌, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ.

ಸೋನಿ ವರ್ಲ್ಡ್ ಜಂಕ್ಷನ್‌ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಎಲಿವೇಟೆಡ್‌ ಕಾರಿಡಾರ್‌ನಲ್ಲಿ 7 ಜಂಕ್ಷನ್‌
1. ಈಜೀಪುರ ಮುಖ್ಯರಸ್ತೆ-ಒಳವರ್ತುಲ ರಿಂಗ್‌ ರಸ್ತೆ ಜಂಕ್ಷನ್‌
2. ಸೋನಿ ವರ್ಲ್ಡ್ ಜಂಕ್ಷನ್‌
3. ಕೇಂದ್ರೀಯ ಸದನ ಜಂಕ್ಷನ್‌
4. ಕೋರಮಂಗಲ 8ನೇ ಮುಖ್ಯ ರಸ್ತೆ ಜಂಕ್ಷನ್‌
5. ಕೋರಮಂಗಲ 60 ಅಡಿ ರಸ್ತೆ ಜಂಕ್ಷನ್‌
6. ಕೋರಮಂಗಲ ಐದನೇ ಬ್ಲಾಕ್‌ 1ಎ ಕ್ರಾಸ್‌ ರಸ್ತೆ ಜಂಕ್ಷನ್‌
7. ಕೋರಮಂಗಲ ಬಿಡಿಎ ಜಂಕ್ಷನ್‌

Advertisement

Udayavani is now on Telegram. Click here to join our channel and stay updated with the latest news.

Next