ಹುಬ್ಬಳ್ಳಿ: ನಗರದಲ್ಲಿ ಮಳೆಗಾಲ ಶುರುವಾಗುವ ಮುನ್ನ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಅಂತಿಮ ಹಂತದಲ್ಲಿರುವ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಇಂಡಿ ಪಂಪ್ ವೃತ್ತದ ಆಸಾರಹೊಂಡದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಕೆಆರ್‌ಐಡಿಎಲ್ ಅನುದಾನದಲ್ಲಿ ವಾರ್ಡ್ 55ರ ಇಂಡಿ ಪಂಪ್‌ನಿಂದ ಆಸಾರಹೊಂಡದ ಮಾರ್ಗವಾಗಿ ಚನ್ನಪೇಟೆ ಮುಖ್ಯ ರಸ್ತೆಯವರೆಗೆ 1ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಮಹಾನಗರ ಪಾಲಿಕೆ ಅನುದಾನದ 86ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಂಡಿ ಪಂಪ್ ವೃತ್ತದಿಂದ ಚನ್ನಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಲಾಗುತ್ತಿದೆ. ಒಳಚರಂಡಿಗಳಲ್ಲಿ ಕಸ-ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದರಿಂದ ಚರಂಡಿ ತುಂಬಿ, ರಸ್ತೆ ಮೇಲೆ ನೀರು ಹರಿಯುತ್ತದೆ. ಜನರು ಓಡಾಡಲು ತೊಂದರೆ ಉಂಟಾಗುತ್ತದೆ. ರಸ್ತೆ-ಒಳಚರಂಡಿ ಕಾಮಗಾರಿಗಳು ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ 56ರ ತೊರವಿ ಹಕ್ಕಲದ ಮುಖ್ಯ ರಸ್ತೆಯ ವೃತ್ತದಲ್ಲಿ ಹೈಮಾಸ್ಟ್ ಅಳವಡಿಕೆಗೆ ಭೂಮಿಪೂಜೆ ನೆರವೇರಿಸಿದರು. ನಂತರ ಪಾಲಿಕೆ ಅನುದಾನದಲ್ಲಿ 35 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲದ ಕಿಟ್ ಹಾಗೂ ನಲ್ಮ್ ಯೋಜನೆಯಡಿ ಫಲಾನುಭವಿಗಳಿಗೆ 2 ಆಟೋಗಳನ್ನು ವಿತರಿಸಿದರು.
ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ಇಕ್ಬಾಲ್ ನವಲೂರ, ಸುಭಾಸ ಅಕ್ಕಲಕೋಟೆ, ಸೀಮಾ ಲದವಾ, ದೇವೇಂದ್ರ ಅಲಕೋಟೆ, ಕೇಶವ ಜಿತೋರಿ, ನಾಗರಾಜ ಕಲಾಲ, ಪಾಲಿಕೆ ಮಾಜಿ ಮಹಾಪೌರ ಪಾಂಡುರಂಗ ಪಾಟೀಲ, ತೋಟಪ್ಪ ನಿಡಗುಂದಿ, ಮಂಜುನಾಥ ದಲಭಂಜನ ಇನ್ನಿತರರಿದ್ದರು.