ರಾಯಚೂರು: ನಗರದಲ್ಲಿ ಆಮೆವೇಗದಲ್ಲಿ ನಡೆದಿರುವ 24×7 ಕುಡಿಯುವ ನೀರು ಯೋಜನೆ ಕಾಮಗಾರಿಯನ್ನು ಮೂರು ತಿಂಗಳೊಳಗೆ ಮುಗಿಸಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಅವಧಿ ವಿಸ್ತರಿಸದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಈಗಾಗಲೇ ಮೂರು ತಿಂಗಳು ಕಾಲಾವಕಾಶ ನೀಡಿದರೂ ಕೆಲಸ ಮುಗಿಸಿಲ್ಲ. ಗುತ್ತಿಗೆ ಪಡೆದ ಕಂಪನಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಿತ್ತು. ಕಂಪನಿಗೆ ನೋಟಿಸ್ ಕೊಡಿ ಎಂದರು.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಚ್ಚುಕಟ್ಟಾಗಿ ನಡೆಯಬೇಕು. ವಾಹನಗಳ ಅಡ್ಡಾದಿಡ್ಡಿ ಓಡಾಟ ತಪ್ಪಿಸಲು ಲೇನ್‌ಗಳನ್ನು ಹಾಕಿ. ಒಳಚರಂಡಿ ನಿರ್ಮಿಸಲು ಅಗೆದ ರಸ್ತೆಗಳನ್ನು ಮರು ನಿರ್ಮಿಸಲು ಕಂಪನಿಗೆ ನಿರ್ದೇಶನ ನೀಡಿ ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಜಿಲ್ಲಾ ಅಧಿಕಾರಿ ಈರಣ್ಣ ಮಾತನಾಡಿ, ರಾಜಸ್ತಾನದ ಎಸ್‌ಪಿಎಂ ಕಂಪನಿಯು 24×7 ನೀರಿನ ಕಾಮಗಾರಿ ನಿರ್ವಹಿಸುತ್ತಿದ್ದು, ಶೇ.75ರಷ್ಟು ಕೆಲಸ ಮುಗಿದಿದೆ. ಕೆಲಸ ವಿಳಂಬ ಮಾಡಿದ್ದಕ್ಕೆ 34 ಲಕ್ಷ ರೂ. ದಂಡ ವಿ ಧಿಸಿದ್ದು, ಪುನಃ 34 ಲಕ್ಷ ರೂ. ದಂಡ ಹಾಕಲು ಶಿಫಾರಸು ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 42 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಅದರಲ್ಲಿ ರಸ್ತೆಗೆ 27 ಕೋಟಿ ರೂ.ಗೆ ಅನುಮೋದನೆ ಸಿಕ್ಕಿದೆ. ಐಬಿ ಕಾಲೋನಿಯಿಂದ ಆರ್‌ಟಿಒ ಕ್ರಾಸ್‌ವರೆಗೂ 2.5 ಕಿ.ಮೀ. ರಸ್ತೆ ಕಾಮಗಾರಿಗೆ ಅನುಮೋದನೆ ಬಂದಿಲ್ಲ. ಫೆ.18ರೊಳಗೆ ಐಬಿ ಕ್ರಾಸ್‌ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ವಿವರಿಸಿದರು.
ಎಸ್‌ಪಿಎಂ ಕಂಪನಿ ಇಂಜಿನಿಯರ್ ಪಂಕಜ್ ಜೈನ ಮಾತನಾಡಿ, ನೀರು ಪೂರೈಕೆಗೆ ಇನ್ನು 10 ದಿನಗಳಲ್ಲಿ ಮುಖ್ಯ ಪೈಪ್‌ಲೈನ್ ಕೆಲಸ ಮುಗಿಸುತ್ತೇವೆ. ಒಟ್ಟು 527 ಕಿ.ಮೀ. ಪೈಪ್‌ಲೈನ್ ಅಳವಡಿಸಬೇಕಿತ್ತು. 400 ಕಿ.ಮೀ. ಪೈಪ್‌ಲೈನ್ ಅಳವಡಿಕೆ ಕೆಲಸ ಮುಗಿದಿದೆ. ಬಾಕಿ 30 ಕಿ.ಮೀ. ಕಾಮಗಾರಿ ಶೀಘ್ರ ಮುಗಿಸುತ್ತೇವೆ.10 ದಿನಗಳ ಬಳಿಕ ನಗರದ 28 ವಲಯಗಳ ಪೈಕಿ 20 ವಲಯಗಳಿಗೆ ನಿರಂತರ ನೀರು ಕೊಡಬಹುದು ಎಂದರು. ನಂತರ ಮಾತನಾಡಿದ ಕುಮಾರ್ ನಾಯಕ್, ಅಮೃತ ಯೋಜನೆಯಡಿ ಕೆಲಸಗಳು ಸರಿಯಾಗಿ ಅನುಷ್ಠಾನ ಗೊಳಿಸಬೇಕು. ಸಂಪರ್ಕ ಕೊರತೆ ಯಿಂದ ಕೆಲಸ ವಿಳಂಬವಾಗಲು ಅಧಿಕಾರಿಗಳು ಕಾರಣರಾಗಬಾರದೆಂದು ಸೂಚಿಸಿದರು. ಎಡಿಸಿ ಗೋವಿಂದರೆಡ್ಡಿ, ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು
ನಗರದಲ್ಲಿ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದು, ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಬೇಕು. ಕೋಟೆ ಕಂದಕ ಪಕ್ಕದಲ್ಲಿ ಹಾಗೂ ಮಾವಿನಕೆರೆ ಸುತ್ತಲೂ ಅನಧಿಕೃತ ಕಟ್ಟಡಗಳಿದ್ದರೆ ತೆರವಿಗೆ ಮುಂದಾಗಬೇಕು.
ಜಿ.ಕುಮಾರ ನಾಯಕ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ