Advertisement

Bantawala: ಕಾಮಗಾರಿಯ ತೊಂದರೆಗಳ ಕುರಿತು ದೂರು; ದ.ಕ.ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

01:23 PM Feb 07, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡಿನಿಂದ ಅಡ್ಡಹೊಳೆಯವರೆಗೆ ನಡೆಯುವ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ವೀಕ್ಷಣೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸಾರ್ವಜನಿಕರ ದೂರನ್ನು ಆಲಿಸಿದ ಅವರು ಕೆಲವೊಂದು ಪರಿಹಾರ ಕಾರ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರಿಗೆ ಸೂಚಿಸಿದರು.

ಅವರು ರೈತ ಸಂಘ ಹಾಗೂ ಸಾರ್ವಜನಿಕ ದೂರಿನ ಹಿನ್ನೆಲೆ ಬಿ.ಸಿ.ರೋಡಿನಿಂದ ಗುಂಡ್ಯವರೆಗೆ ವೀಕ್ಷಿಸಲು ಬೆಳಿಗ್ಗೆ ಅಧಿಕಾರಿಗಳೊಂದಿಗೆ ತೆರಳಿದರು. ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರುವೃತ್ತದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿಯತ್ತ ತೆರಳಿದ್ದರು.

Advertisement

ಮೆಲ್ಕಾರ್ ನಲ್ಲಿ ಗುಡ್ಡವನ್ನು ಅಗೆದ ಪರಿಣಾಮವಾಗಿ ಕೆಲವೊಂದು ಮನೆಗಳಿಗೆ ಹಾನಿಯಾಗುವ ಸಂಭವ ಇರುವುದರಿಂದ ಮತ್ತು ಇನ್ನು ಕೆಲ ಮನೆಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡ ಹಿನ್ನೆಲೆ ಅವರಿಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸುವ ಕುರಿತು ವಿಷಯ ಪ್ರಸ್ತಾಪ ಮಾಡಿದ್ದಲ್ಲದೆ,ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಯ ವೇಳೆ ದೂಳಿನ ಸಮಸ್ಯೆ ಉಂಟಾಗುತ್ತಿದ್ದು, ಸರಿಯಾಗಿ ನೀರು ಹಾಕುತ್ತಿಲ್ಲ ಎಂಬ ದೂರನ್ನು ಸಾರ್ವಜನಿಕರು ಜಿಲ್ಲಾಧಿಕಾರಿ ಅವರಲ್ಲಿ ದೂರಿದರು‌. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ದೂರುಗಳು ಬಾರದ ರೀತಿ ಸ್ಥಳೀಯ ಗ್ರಾ.ಪಂ.ನವರು ರಸ್ತೆಗೆ ನೀರು ಹಾಕುವ ಜವಾಬ್ದಾರಿ ವಹಿಸಬೇಕು ಎಂದು ತಹಶಿಲ್ದಾರ್ ಅವರಲ್ಲಿ ತಿಳಿಸಿದರು.

ಧೂಳಿನ ಸಮಸ್ಯೆಯಿಂದ ಕಲ್ಲಡ್ಕ ಪರಿಸರದ ಅನೇಕರಿಗೆ ಅಸ್ತಮಾ, ಶ್ವಾಸಕೋಶದ ತೊಂದರೆ ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಲ್ಲಿ ಅಳಲು ತೋಡಿಕೊಂಡಿರು.

ಸಾರ್ವಜನಿಕರು ನೀಡುವ ದೂರಿಗೆ ಕಂಪೆನಿಯ ಕೆಲಸಗಾರರು ಕಿವಿಗೊಡುವುದಿಲ್ಲ ಎಂದು ಅವರು ಆರೋಪ ಮಾಡಿದರು. ಮುಂದೆ ಇಂತಹ ಯಾವುದೇ ಸಮಸ್ಯೆಗಳು ಉಂಟಾಗದಂತೆ ತಹಶಿಲ್ದಾರ್ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ ಗಳನ್ನು ತುಂಡರಿಸಲಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಅಂತಹ ಕಡೆಗಳಲ್ಲಿ ಹೊಸ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿಗೆ ಯಾವುದೇ ಕುಂದುಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಂಟ್ವಾಳ ತಹಶಿಲ್ದಾರ್ ಡಿ.ಅರ್ಚನಾ ಭಟ್, ಬಂಟ್ವಾಳ ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ, ಟ್ರಾಫಿಕ್ ಎಸ್.ಐ.ಸಂಜೀವ, ಕಂದಾಯ ನಿರೀಕ್ಷಕರಾದ ವಿಜಯ್ ಮತ್ತು ಜನಾರ್ದನ, ಗ್ರಾಮ ಕರಣಿಕ ನಾಗರಾಜ್ ಮತ್ತಿತರ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next