ಹಾವೇರಿ: ಯಾವುದಾದರೂ ದಾಖಲೆ, ವಸ್ತು ಕಳೆದುಹೋಗಿದೆಯಾ? ಕಳೆದ ದಾಖಲೆ, ವಸ್ತು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಬೇಕಾ? ಹಾಗಿದ್ದರೆ ಈಗ ಖುದ್ದು ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕೆಂತಿಲ್ಲ. ಮೊಬೈಲ್‌ನಿಂದ ಆ್ಯಪ್ ಮೂಲಕವೇ ದೂರು ದಾಖಲಿಸಿ ಸ್ವೀಕೃತಿ ಪಡೆಯುವ ಸೌಲಭ್ಯ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೊಳಿಸಿದೆ.
ಸದ್ಯ ಈಗಾಗಲೇ ಬೆಂಗಳೂರು ಸಿಟಿ ಪೊಲೀಸ್ ಅಳವಡಿಸಿಕೊಂಡಿರುವ ಇ-ಲಾಸ್ಟ್ ಆ್ಯಪ್ ಮೂಲಕ ಈ ರೀತಿ ದೂರು ದಾಖಲಿಸುವ ಅವಕಾಶ ಜಿಲ್ಲಾ ಪೊಲೀಸ್ ಇಲಾಖೆ ನೀಡಿದೆ. ಇ ಲಾಸ್ಟ್ ಆ್ಯಪ್ ಪರಿಚಯಿಸುವ ಮೂಲಕ ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೆ ಠಾಣೆಗೆ ಬರುವುದನ್ನು ತಪ್ಪಿಸುತ್ತಿದೆ. ಜನರ ಸಮಯ, ಹಣ ವ್ಯಯವಾಗುವುದನ್ನು ತಪ್ಪಿಸಲು ಈ ಜನಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಆದರೆ, ಇದು ಕಳುವಾದ ವಸ್ತುವಿಗೆ ಸಂಬಂಧಪಡುವುದಿಲ್ಲ. ಕಳೆದು ಹೋದ ವಸ್ತು, ದಾಖಲೆಗೆ ಸಂಬಂಧಪಟ್ಟಂತೆ ಮಾತ್ರ ಈ ಆ್ಯಪ್‌ನಲ್ಲಿ ದೂರು ದಾಖಲಿಸಿ ಸ್ವೀಕೃತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಆ್ಯಪ್‌ನಲ್ಲಿ ದೂರು ದಾಖಲು: ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ವೋಟರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿ ದಾಖಲೆಗಳು ಹಾಗೂ ಇತರ ಯಾವುದೇ ವಸ್ತುಗಳು ಕಳೆದು ಹೋದ ಸಂದರ್ಭದಲ್ಲಿ ಠಾಣೆಗೆ ದೂರು ನೀಡಿ ಸ್ವೀಕೃತಿ ಪಡೆಯಬೇಕಾಗುತ್ತಿತ್ತು. ಠಾಣೆಯಿಂದ ದೂರಿನ ಪ್ರತಿ ನೀಡಿದರೆ ಮಾತ್ರ ದಾಖಲೆಗಳ ನಕಲು ಪ್ರತಿ ಪಡೆಯಬಹುದಿತ್ತು. ಬಹುತೇಕ ಸಂದರ್ಭಗಳಲ್ಲಿ ಸಿಮ್ ಕಾರ್ಡ್ ಕಳೆದುಹೋಗಿ ಅದೇ ನಂಬರ್ ಪಡೆಯಬೇಕಾದಾಗ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಸ್ವೀಕೃತಿ ಪತ್ರ ಅಗತ್ಯವಾಗುತ್ತಿತ್ತು. ಇದಕ್ಕಾಗಿ ಸಾರ್ವಜನಿಕರು ಠಾಣೆಗೆ ಬಂದು ದೂರು ನೀಡಬೇಕಾಗುತ್ತಿತ್ತು. ಹೀಗೆ ಸಣ್ಣ ಪುಟ್ಟ ಪ್ರಕರಣದಲ್ಲೂ ಸಾರ್ವಜನಿಕರನ್ನು ಠಾಣೆಗೆ ಅಲೆದಾಡುವುದನ್ನು ತಪ್ಪಿಸಲು ಆ್ಯಪ್ ಮೂಲಕ ದೂರು ದಾಖಲಿಸುವ ಅವಕಾಶ ಜಾರಿಗೊಳಿಸಲಾಗಿದೆ.
ಪ್ಲೇಸ್ಟೋರ್‌ನಲ್ಲಿರುವ ಇ ಲಾಸ್ಟ್ ರಿಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ದೂರು ದಾಖಲಿಸುವ ಮುನ್ನ ದೂರುದಾರ ತನ್ನ ಪ್ರಾಥಮಿಕ ವಿವಿರ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಕಳೆದು ಹೋದ ವಸ್ತು ಅಥವಾ ದಾಖಲೆ ವಿವರ, ಯಾವ ಸ್ಥಳದಲ್ಲಿ, ಯಾವ ಠಾಣೆ ವ್ಯಾಪ್ತಿ, ಕಳೆದುಹೋದ ಸಮಯ ಇತ್ಯಾದಿ ಮಾಹಿತಿ ದಾಖಲಿಸಬೇಕು. ಹೀಗೆ ಮಾಹಿತಿ ದಾಖಲಿಸಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ದೂರುದಾರನ ಮೊಬೈಲ್ ಹಾಗೂ ಇ ಮೇಲ್‌ಗೆ ಡಿಜಿಟಲ್ ವರದಿ ಕಳಿಸಲಾಗುತ್ತದೆ. ಈ ಡಿಜಿಟಲ್ ಸ್ವೀಕೃತಿ ಆಧಾರದ ಮೇಲೆ ಕಳೆದುಹೋದ ದಾಖಲೆಗಳ ನಕಲು ಪಡೆಯಲು (ಡ್ರೈವಿಂಗ್ ಲೈಸೆನ್ಸ್, ಅಂಕಪಟ್ಟಿ ಇತ್ಯಾದಿ) ಅನುಕೂಲವಾಗಲಿದೆ. ಇದು ಪೊಲೀಸ್ ಇಲಾಖೆಯಲ್ಲಿ ತೀವ್ರತರವಲ್ಲದ ಪ್ರಕರಣವಾಗಿ ದಾಖಲಾಗಲಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಬೇಕಿಲ್ಲ. ತನಿಖೆ ನಡೆಸುವ ಅಗತ್ಯವೂ ಇರುವುದಿಲ್ಲ.