Advertisement

Mangaluru; ಶಾಸಕರ ಅನರ್ಹಗೊಳಿಸಲು ಸ್ಪೀಕರ್‌ಗೆ ದೂರು: ಐವನ್‌ ಡಿಸೋಜಾ

12:00 AM Feb 15, 2024 | Team Udayavani |

ಮಂಗಳೂರು: ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಶಾಸಕತ್ವದ ಘನತೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಜನಪ್ರತಿನಿಧಿಯೊಬ್ಬರು ಧರ್ಮದವಿಷಯವನ್ನಿಟ್ಟುಕೊಂಡು ವಿದ್ಯಾದೇಗುಲಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಅವರ ಶಾಸಕತ್ವ ಅನರ್ಹಗೊಳಿಸಲು ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿ ತನಿಖೆ ನಡೆಸುವಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಲಾಗುವುದು ಹಾಗೂ ಶಾಸಕರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಅವರು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಶಾಲೆ ಕಚೇರಿಯೊಳಗೆ ಮಾತುಕತೆ ನಡೆಸಿ ಈ ಸಮಸ್ಯೆ ಬಗೆಹರಿಸಬೇಕಿತ್ತು. ಬದಲಾಗಿ ಶಾಲಾ ಶಿಕ್ಷಕ ವರ್ಗದವರನ್ನು ಬೀದಿಯಲ್ಲಿ ನಿಲ್ಲಿಸಿ ಬೆದರಿಸಿ ಅವಹೇಳನಗೊಳಿಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳನ್ನು ಕರೆಸಿ, ಜೈಕಾರ ಹಾಕುವಂತೆ ಒತ್ತಾಯಿಸಿ ಮಕ್ಕಳ ಹಕ್ಕುಗಳ ಕಾಯ್ದೆ, ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘಿಸಿದ್ದಾರೆ. ಶಾಸಕತ್ವದ ಘನತೆಗೆ ಕುಂದುಂಟಾಗುವಂತೆ ವರ್ತಿಸಿದ್ದಾರೆ. ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಶಾಸಕ ಡಾ|ಭರತ್‌ ಶೆಟ್ಟಿ ಅವರು ಕ್ರಿಶ್ಚಿಯನ್‌ ಶಾಲೆಗಳನ್ನು ಬಹಿಷ್ಕರಿಸುವಂತೆ ಹೇಳಿದ್ದಾರೆ. ಶಾಲೆ ಹೊರಗೆ ಕಾರ್ಪೊರೇಟರ್‌ಗಳು, ಸಂಘಟನೆಯವರು ಧರ್ಮ ಅವಹೇಳನ ಮಾಡಿದ್ದಾರೆ. ಶಿಕ್ಷಕಿಯೊಬ್ಬರು ತಪ್ಪು ಮಾಡಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಆದರೆ ಎಲ್ಲ ಶಿಕ್ಷಕ ವರ್ಗದವರನ್ನು ಅಪಮಾನಿಸಿರುವುದು ಅಕ್ಷಮ್ಯ ಎಂದರು.
ಮಾಜಿ ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಈ ಪ್ರಕರಣದಲ್ಲಿ ಇಬ್ಬರೂ ಶಾಸಕರಿಂದ ನಿಯಮ ಉಲ್ಲಂಘನೆಯಾಗಿದೆ. ಕಾನೂನು ರೂಪಿಸುವವರೇ ಕಾನೂನು ಉಲ್ಲಂಘಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಪಿ.ವಿ ಮೋಹನ್‌, ಸದಾಶಿವ ಉಳ್ಳಾಲ, ಎ.ಸಿ. ವಿನಯ್‌ರಾಜ್‌, ನವೀನ್‌ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

ಶಾಲೆಯಲ್ಲಿ ಪ್ರತಿಭಟನೆ;
ಧರ್ಮಪ್ರಾಂತ ಕಳವಳ
ಮಂಗಳೂರು: ಖಾಸಗಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಕುರಿತು ಮಂಗಳೂರು ಧರ್ಮಪ್ರಾಂತವು ಕಳವಳ ವ್ಯಕ್ತಪಡಿಸಿದೆ.

Advertisement

ಶಿಕ್ಷಕರ ವಿರುದ್ಧ ಆಧಾರರಹಿತ ಆರೋಪ ದುರದೃಷ್ಟಕರ ಹಾಗೂ ದುಃಖಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಇಂಗ್ಲಿಷ್‌ ಶಿಕ್ಷಕಿಯು ರವೀಂದ್ರನಾಥ ಠಾಗೋರ್‌ ಅವರ “ವರ್ಕ್‌ ಈಸ್‌ ವರ್ಶಿಪ್‌’ ಎಂಬ ಕವಿತೆ ಬಗ್ಗೆ ಬೋಧಿಸುತ್ತಿದ್ದರು. ಅದರಲ್ಲಿ “ದೇವಾಲಯದ ಬಾಗಿಲು ಮುಚ್ಚಿರುವ ಈ ಏಕಾಂಗಿ ಕತ್ತಲೆ ಮೂಲೆಯಲ್ಲಿ ಯಾರನ್ನು ಪೂಜಿಸುತ್ತೀರಿ?’ ಎಂಬ ಸಾಲುಗಳನ್ನು ವಿವರಿಸುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವಂಥ ಯಾವ ವಿಷಯವನ್ನೂ ಅವರು ಹೇಳಲಿಲ್ಲ ಎಂದು ಧರ್ಮಪ್ರಾಂತದ ಪ್ರಕಟನೆ ತಿಳಿಸಿದೆ.

ಇಡೀ ಘಟನೆಗಳ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾಕ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಆಯೋಗವು ನ್ಯಾಯಯುತ ತನಿಖೆ ನಡೆಸಬೇಕು. ಶಾಸಕರು ಶಿಕ್ಷಕಿ ಹಾಗೂ ಮಕ್ಕಳ ಬಗ್ಗೆ ತೋರಿದ ವರ್ತನೆ ಬಗ್ಗೆಯೂ ತನಿಖೆ ನಡೆಸಬೇಕು ಎಂದು ವಿನಂತಿಸುವುದಾಗಿ ಧರ್ಮಪ್ರಾಂತದ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ| ಜೆ.ಬಿ. ಸಲ್ಡಾನ್ಹಾ ಹಾಗೂ ರಾಯ್‌ ಕ್ಯಾಸ್ಟಲಿನೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಾಸಕರ ವಿರುದ್ಧವೂ ದೂರು ದಾಖಲು
ಮಂಗಳೂರು: ಶಾಲೆಯೊಂದರ ಶಿಕ್ಷಕಿ ತರಗತಿಯಲ್ಲಿ ಹಿಂದೂ ಧರ್ಮ ಅವಹೇಳನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ| ಭರತ್‌ ಶೆಟ್ಟಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಶಿಕ್ಷಕಿ ವಿರುದ್ಧ ಪೋಷಕರು, ಹಿಂದೂ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಆ ಶಿಕ್ಷಕಿ ಮತ್ತು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಮಾನತಿಗೆ ಪಟ್ಟು ಹಿಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next