ಮಂಗಳೂರು : ವಾಗ್ಮಿ ಚರ್ಕವರ್ತಿ ಸೂಲಿಬೆಲೆ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ವಿರುದ್ಧ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ ಖಾಸಗಿ ದೂರು ದಾಖಲಿಸಿದ್ದಾರೆ.
ಮಂಗಳೂರಿನ ಪ್ರಥಮ ದರ್ಜೆ ಕೋರ್ಟ್‌ನಲ್ಲಿ ಸಚಿವ ರೈ ಅವರಿಂದ ಉದ್ದೇಶಪೂರ್ವಕವಾಗಿ ಸೂಲಿಬೆಲೆ ಅವರ ಮಾನಹಾನಿಯಾಗಿದೆ ಎಂದು ಖಾಸಗಿ ದೂರು ಸಲ್ಲಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ವಿರುದ್ಧ, ರಮಾನಾಥ ರೈ ಅವರು ಕೀಳುಭಾಷೆಯಲ್ಲಿ ಮಾತನಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಸೈಗೋಳಿಯಲ್ಲಿ ನಡೆದ ಉಳ್ಳಾಲ ಮತ್ತು ಮುಡಿಪು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸ್ವಾತಂತ್ರ್ಯಹೋರಾಟದಲ್ಲಿ ನೆಹರೂ ಪಾತ್ರದ ಬಗ್ಗೆ ಉಲ್ಲೇಖಿಸುತ್ತ ಅವರು ಮಾತನಾಡುತ್ತಾ “ಸ್ವಾತಂತ್ರ್ಯ ಬರಬೇಕೆಂದು ನೆಹರೂ ಜೈಲಿನಲ್ಲಿ ಕುಳಿತಿದ್ದರು. ಅಂತಹ ನೆಹರೂ ಅವರನ್ನು ಚಕ್ರವರ್ತಿ ಸೂಲಿಬೆಲೆ ಎನ್ನುವ ವ್ಯಕ್ತಿ…. ಎನ್ನುತ್ತ ಕೀಳುಭಾಷೆ ಪ್ರಯೋಗಿಸಿದ್ದರು.
ಬಳಿಕ ವೇದಿಕೆಯಲ್ಲಿ ಆಸೀನರಾಗಿರುವ ಇತರರ ಬಳಿ ತಿರುಗಿ ನೋಡುವ ದೃಶ್ಯ ವೀಡಿಯೋದಲ್ಲಿದೆ. ಇಷ್ಟಕ್ಕೇ ಸುಮ್ಮನಾಗದ ಸಚಿವರು ಮತ್ತೆ ಕಾರ್ಯಕರ್ತರನ್ನುದ್ದೇಶಿಸಿ “ಚಕ್ರವರ್ತಿ…’ಎಂದು ಹೇಳಿದ್ದರು. ಅದಕ್ಕೆ ಕಾರ್ಯಕರ್ತರೂ ದನಿಗೂಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.