ಬೆಂಗಳೂರು: ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಪೊಲೀಸ್ ಠಾಣೆ ಯಲ್ಲಿ 2 ಪ್ರತ್ಯೇಕ ದೂರು ದಾಖಲಾಗಿದೆ.
“ಸುಮಾರು 500 ವರ್ಷಗಳ ಕಾಯುವಿಕೆ ಮತ್ತು ಕೋಟಿಗಟ್ಟಲೆ ಭಾರತೀಯರ ಆಶಯವನ್ನು ಪ್ರಧಾನಿ ಈಡೇರಿಸಿದ್ದಾರೆ. ಭಾರತೀಯತೆ ಉಳಿಯಲು ಬಿಜೆಪಿಗೆ ಮತ ನೀಡಿ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗುರುವಾರ ತೇಜಸ್ವಿ ಸೂರ್ಯ ಬರೆದುಕೊಂಡಿದ್ದರು. ಜತೆಗೆ ಅಯೋಧ್ಯೆಯ ಬಾಲ ರಾಮನ ಹಣೆಗೆ ಸೂರ್ಯ ಸ್ಪರ್ಶಿಸುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದಲ್ಲದೇ, ಶುಕ್ರವಾರ ಇದೇ ಮಾದರಿಯ ಮತ್ತೂಂದು ರೀತಿಯಲ್ಲಿ ಹೇಳಿಕೆ ಕೊಟ್ಟಿದ ದೃಶ್ಯವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಶೇ.80 ಬಿಜೆಪಿ ಬೆಂಬಲಿಗರು ಮತ್ತು ಮತದಾರರು ಇದ್ದರೂ ಸಹ ಕೇವಲ ಶೇ.20 ಜನರು ಮಾತ್ರ ಮತ ಚಲಾಯಿಸಲು ಬರುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಅನುಕೂಲವಾಗಿದೆ. ನಾವು ಶೇ.80 ಇದ್ದೇವೆ. ಆದರೆ, ಮತದಾನದ ದಿನದಂದು ಹೊರಗೆ ಬರುತ್ತಿರುವುದು ಕೇವಲ ಶೇ.20 ಮಾತ್ರ. ಕಾಂಗ್ರೆಸ್ ಬೆಂಬಲಿಗರು ಶೇ.20 ಇದ್ದಾರೆ. ಆದರೆ, ಅವರು ಹೊರಗೆ ಬಂದು ಶೇ.80ರಷ್ಟು ಮತ ಚಲಾಯಿಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಹೊರ ಬಂದು ಮತದಾನ ಮಾಡಬೇಕು ಎಂದು ತೇಜಸ್ವಿ ಸೂರ್ಯ ಸುದ್ದಿ ಸಂಸ್ಥೆಯೊಂದಿಗೆ ಹೇಳಿಕೆ ನೀಡಿರುವ ದೃಶ್ಯದ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.
ಮತದಾನದ 48 ಗಂಟೆ ಮೊದಲು ಯಾವುದೇ ಮಾಧ್ಯಮಗಳಲ್ಲಿ ಧರ್ಮಾಧಾರಿತ ಪ್ರಚಾರ ಮಾಡುವಂತಿಲ್ಲ. ಯಾವುದೇ ಧರ್ಮವನ್ನು ಇಟ್ಟುಕೊಂಡು ಪ್ರಚಾರ ಮಾಡಬಾರದು ಎಂಬ ನಿಯಮಗಳಿವೆ.