ಬೆಂಗಳೂರು: ಫಲವತ್ತಾದ ಕೃಷಿ ಭೂಮಿಯನ್ನು ವಸತಿ ನಿರ್ಮಾಣ ಉದ್ದೇಶಕ್ಕೆ ಪರಿವರ್ತಿಸಿದ ಆರೋಪ ಮೇಲೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಆರು ಮಂದಿ ಅಧಿಕಾರಿಗಳು ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಗುರುವಾರ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಹೊಸಕೋಟೆ ಯೋಜನಾ ಪ್ರಾಧಿಕಾರದಲ್ಲಿ “ಮಾಸ್ಟರ್ ಪ್ಲಾನ್’ ಹೆಸರಿನಲ್ಲಿ ಭಾರೀ ಭೂ ಹಗರಣ ನಡೆದಿದ್ದು, ಯೋಜನೆ ಹೆಸರಿನಲ್ಲಿ 870 ಹೆಕ್ಟೇರ್ ಕೃಷಿ ಭೂಮಿಯನ್ನು ಅಕ್ರಮವಾಗಿ ವಸತಿ ಉದ್ದೇಶಕ್ಕೆ ಪರಿವರ್ತಿಸಲಾಗಿದೆ ದಿನೇಶ್ ಕಲ್ಲಹಳ್ಳಿ ಆರೋಪಿಸಿದರು.
ಈ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್, ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ತಿಮ್ಮೇಗೌಡ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಎಂಆರ್‌ಡಿಎ ಆಯುಕ್ತ ಬಿ.ಎಸ್.ಶೇಖರಪ್ಪ, ಬಿಎಂಆರ್‌ಡಿಎ ಮಹಾನಗರ ಯೋಜಕ ಎನ್.ಕೆ.ತಿಪ್ಪೆಸ್ವಾಮಿ, ಸರ್ಕಾರದ ಉಪ ಕಾರ್ಯದರ್ಶಿ ಎನ್.ನರಸಿಂಹ ಮೂರ್ತಿ, ಬಿಎಂಆರ್‌ಡಿಎ ಹೆಚ್ಚುವರಿ ನಿರ್ದೇಶಕ ವಿ.ಧನಂಜಯ್ ರೆಡ್ಡಿ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಹಿಂದೆ ಪ್ರಾಧಿಕಾರದ ಮಹಾ ಆಯುಕ್ತರಾಗಿದ್ದ ರಾಜೀವ್ ಜಾವ್ಲಾ ಅವರು ಭೂ ಪರಿವರ್ತನೆಗೆ ನಿರಾಕರಿಸಿದ್ದರೂ ಸಚಿವ ಕೆ.ಜೆ.ಜಾರ್ಜ್ ಹಾಗೂ ಏಳು ಅಧಿಕಾರಿಗಳು, 40 ಮಂದಿ ಬಿಲ್ಡರ್‌ಗಳ ಜತೆ ಸೇರಿಕೊಂಡು ಸುಮಾರು 870 ಎಕರೆ ಕೃಷಿ ಭೂಮಿಯನ್ನು ಖರೀದಿಸಿ ವಸತಿ ಉಪಯೋಗಕ್ಕೆ ಲೇಔಟ್ ಮಾಡಲೆಂದು ಭೂ ಪರಿವರ್ತನೆ ಮಾಡಿದ್ದಾರೆ. ಈ ಮೂಲಕ 150 ಕೋಟಿ ರೂ. ಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.