ರಾಯಚೂರು: ಮಕ್ಕಳು ಯಾವಾಗಲೂ ದೊಡ್ಡ ಕನಸು ಕಾಣಬೇಕು ಎನ್ನುತ್ತಿದ್ದರು ಅಬ್ದುಲ್ ಕಲಾಂ. ಅವರ ಮಾತನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ ಇಲ್ಲಿನ ಅಧಿಕಾರಿಯೊಬ್ಬರು ಪ್ರೌಢಶಾಲೆ ಮಕ್ಕಳಿಗೆ ದೊಡ್ಡ ಕನಸುಗಳನ್ನು ಬಿತ್ತುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರಾಯಚೂರು ವಿಭಾಗದ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಎಲ್ಲ ಪ್ರೌಢಶಾಲೆಗಳ ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ದೇಣಿಗೆ ನೀಡುತ್ತಿದ್ದಾರೆ. ಆ ಮೂಲಕ ಪ್ರೌಢಾವಸ್ಥೆಯಲ್ಲಿಯೇ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪರಿಚಯ ಮೂಡಿಸುವ ಜತೆಗೆ ದೊಡ್ಡ ಕನಸುಗಳು ಮೂಡಲಿ ಎಂಬ ಮಹದಾಸೆ ವ್ಯಕ್ತಪಡಿಸುತ್ತಾರೆ.
ಪುಸ್ತಕ ಸಂಸ್ಥೆಯೊಂದು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ನೀಡಲು ಮುಂದೆ ಬಂದಿದೆ. ಈ ಅವಕಾಶ ಬಳಸಿಕೊಂಡು ಸಂತೋಷ ಕಾಮಗೌಡ, ತಮ್ಮಿಂದಾದ ನೆರವು ನೀಡುವ ಜತೆಗೆ ಕೆಲ ದಾನಿಗಳ ಮೂಲಕ ಪುಸ್ತಕ ದೇಣಿಗೆ ನೀಡಲು ಮುಂದಾಗಿದ್ದಾರೆ.
ರಾಯಚೂರು ತಾಲೂಕಿನ 109 ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಪ್ರೌಢಶಾಲೆಗಳ ಜತೆಗೆ, ಮಾನ್ವಿ-68, ದೇವದುರ್ಗದ 48 ಪ್ರೌಢಶಾಲೆಗಳಿಗೂ ಪುಸ್ತಕ ನೀಡಲಾಗುತ್ತಿದೆ. ಈ ಕುರಿತು ಈಗಾಗಲೇ ಬಿಇಒಗೆ ಪತ್ರ ಬರೆದಿರುವ ಸಹಾಯಕ ಆಯುಕ್ತರು, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಬೇಕು. ಅದು ಪ್ರೌಢಾವಸ್ಥೆಯಲ್ಲೇ ಆದರೆ ಇನ್ನೂ ಉತ್ತಮ. ಗ್ರಂಥಾಲಯಗಳಿಗೆ ಉಚಿತ ಪುಸ್ತಕಗಳನ್ನು ದೇಣಿಗೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪತ್ರ ಬರೆದಿದ್ದಾರೆ.
ಪ್ರತಿ ಶಾಲೆಗೆ ಸಮಗ್ರ ಸಾಮಾನ್ಯ ಜ್ಞಾನ, ಕನ್ನಡ ವ್ಯಾಕರಣ ಮತ್ತು ರಚನೆ, ಇಂಗ್ಲಿಷ್ ಗ್ರಾಮರ್ ಫಾರ್ ದಿ ಯಂಗ್ ಪುಸ್ತಕ ದೇಣಿಗೆಯಾಗಿ ನೀಡುತ್ತಿದ್ದಾರೆ. ಶಾಲೆಗಳ ಗ್ರಂಥಾಲಯಗಳಲ್ಲಿ ಮಕ್ಕಳ ಓದಿಗೆ ಲಭ್ಯವಾಗುವಂತೆ ಪುಸ್ತಕ ಬಳಸಿಕೊಳ್ಳಲು ತಿಳಿಸಲಾಗಿದೆ.
ಪ್ರೇರಣೆಯಲ್ಲೇ ಸಂತೋಷ..!: ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಈ ಮುಂಚೆಯೂ ಇಂಥ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಸಂಘ ಸಂಸ್ಥೆಗಳು ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಳಿಗೆ ತೆರಳಿ ವಿಶೇಷ ಉಪನ್ಯಾಸ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದಾರೆ. ಮಕ್ಕಳನ್ನು ಪ್ರೇರೇಪಿಸುವುದಲ್ಲೇ ಸಂತೋಷ ಕಾಣುವ ಅವರ ಸಾಕಷ್ಟು ಮಕ್ಕಳಿಗೆ ಮಾದರಿ ಆಗುತ್ತಿರುವುದು ನಿಜ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಚ್ಛಾಶಕ್ತಿ ಎಂಬುದು ಸ್ಫೂರ್ತಿದಾಯಕ ಮಂತ್ರವಾಗಿದೆ. ವಿಷಯದ ಮೇಲಿನ ಏಕಾಗ್ರತೆ, ಗುರಿಯೆಡೆಗಿನ ಪಯಣ ನಮ್ಮನ್ನು ಸಾಧನೆಯತ್ತ ಕರೆದೊಯ್ಯುತ್ತದೆ. ಇಂಥ ಶಕ್ತಿ ಮಕ್ಕಳಲ್ಲಿ ಪ್ರೌಢಾವಸ್ಥೆಯಲ್ಲಿಯೇ ಮೂಡಿದರೆ ಮುಂದೆ ಅವರ ಹಾದಿ ಬಹಳ
ಸುಗಮವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಗೀಳು ಹೆಚ್ಚಿಸುವ ಉದ್ದೇಶದಿಂದಲೇ ಎಲ್ಲ ಪ್ರೌಢಶಾಲೆಗಳಿಗೆ ಉಚಿತ ಪುಸ್ತಕಗಳನ್ನು ನೀಡಲಾಗುತ್ತಿದೆ. ಕೆಲದಾನಿಗಳ ನೆರವಿನೊಂದಿಗೆ ನಾನು ಕೈ ಜೋಡಿಸಿದ್ದೇನೆ.
ಸಂತೋಷ ಎಸ್. ಕಾಮಗೌಡ,
ಸಹಾಯಕ ಆಯುಕ್ತ