Advertisement

ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

12:30 AM Jan 14, 2019 | Team Udayavani |

ಲಕ್ನೋ: ದೇಶದ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದ ಜತೆ ಗುರುತಿಸಿಕೊಳ್ಳಲು ವಿಫ‌ಲವಾದ ಕಾಂಗ್ರೆಸ್‌ ಈಗ ಎಲ್ಲ 80 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಜತೆಗೆ ಈ ರಾಜ್ಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಟ್ಟು 13 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಪ್ರತ್ಯೇಕವಾಗಿ ರೈತರ ಸಮಾವೇಶವನ್ನೂ ಆಯೋಜಿಸಲು ಮುಂದಾಗಿದ್ದಾರೆ.

Advertisement

ರವಿವಾರ ಲಕ್ನೋದಲ್ಲಿ ಹಿರಿಯ ನಾಯಕರ ಜತೆ ಬಿರುಸಿನ ಸಮಾಲೋಚನೆ ನಡೆಸಿದ ಬಳಿಕ ಕಾಂಗ್ರೆಸ್‌ ಉಸ್ತುವಾರಿ ಗುಲಾಂ ನಬಿ ಆಜಾದ್‌ ಈ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಎಲ್ಲಾ 80 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಅಲ್ಲದೆ, ಬಿಜೆಪಿಯನ್ನು ಸೋಲಿಸಬೇಕು ಎಂಬ ಮನಃಸ್ಥಿತಿಯುಳ್ಳ ಪಕ್ಷ ಮತ್ತು ಕಾಂಗ್ರೆಸ್‌ ಜತೆಗೆ ಹೆಜ್ಜೆ ಹಾಕಲು ಸಿದ್ಧವಿರುವ ಯಾವುದೇ ರಾಜಕೀಯ ಪಕ್ಷವನ್ನೂ ಮೈತ್ರಿಗೆ ಸ್ವಾಗತಿಸುವುದಾಗಿ ಆಜಾದ್‌ ಹೇಳಿದ್ದಾರೆ. 

ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಕಾಂಗ್ರೆಸ್‌ ಎಲ್ಲಾ 80 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ದಲ್ಲಿ ಭಾಗಿಯಾಗಿ ಮಹಾ ಮೈತ್ರಿಕೂಟ ರಚಿಸಬೇಕು ಎಂಬ ಇರಾದೆ ಪಕ್ಷಕ್ಕೆ ಇತ್ತು. ಆದರೆ ಅವರು ನಮ್ಮ ಜತೆಗೆ ಕೈಜೋಡಿಸದೇ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ ಆಜಾದ್‌.

ಮೈತ್ರಿಗೆ ಸಿದ್ಧ: ರಾಯ್‌ಬರೇಲಿ ಮತ್ತು ಅಮೇಠಿಯಿಂದ ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೂಟ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಅದೇ ರೀತಿ, ಮಾಯಾವತಿ ಅಥವಾ ಅಖೀಲೇಶ್‌ ಯಾದವ್‌ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಅವರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಗುಲಾಂ ನಬಿ ಆಜಾದ್‌ ಯಾವುದೇ ರೀತಿಯಲ್ಲಿ ಸ್ಪಷ್ಟ ಉತ್ತರ ನೀಡಲಿಲ್ಲ. ಚುನಾವಣೋತ್ತರ ಪರಿಸ್ಥಿತಿಯಲ್ಲಿ ಎಸ್‌ಪಿ-ಬಿಎಸ್‌ಪಿ ಜತೆಗೆ ಮೈತ್ರಿ ಏರ್ಪಡಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಜಾದ್‌, ಎಲ್ಲಾ ಜಾತ್ಯತೀತ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
 
ಎಸ್‌ಪಿ-ಬಿಎಸ್‌ಪಿ ಮೈತ್ರಿಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಯಾರೂ ಅಸಮಾಧಾನಗೊಂಡಿಲ್ಲ ಮತ್ತು ಧೃತಿಗೆಟ್ಟಿಲ್ಲ ಎಂದು ಹೇಳಿದ್ದಾರೆ. ಬದಲಾಗಿ ಕಾರ್ಯ ಕರ್ತರು ರಾಜ್ಯದಲ್ಲಿ 25 ಸ್ಥಾನಗಳಿಗೆ ಸ್ಪರ್ಧೆ ಮಾಡಬೇಕು ಎಂದು ಸಲಹೆ ನೀಡಿದ್ದರು. ಆದರೆ ನಾವೀಗ ಎಲ್ಲ  80 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದಿದ್ದಾರೆ ಆಜಾದ್‌. 

ಸಮಾಜ ಒಡೆಯುತ್ತಿದೆ: ಅಧಿಕಾರಕ್ಕಾಗಿ ಬಿಜೆಪಿ ದೇಶವನ್ನು ಮತ್ತು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಬಗ್ಗೆ ಕಾಳಜಿ ಹೊಂದಿಲ್ಲ. ಅವರು ತಮ್ಮ ಹುದ್ದೆಯ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ ಎಂದು ಆಜಾದ್‌ ಟೀಕಿಸಿದ್ದಾರೆ. 

Advertisement

13 ರ‍್ಯಾಲಿ: ಮಹತ್ವದ ಘೋಷಣೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಫೆಬ್ರವರಿಯಲ್ಲಿ 13 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆರು ಲೋಕಸಭಾ ಕ್ಷೇತ್ರಗಳನ್ನು ಸೇರಿಸಿ ಈ ರ್ಯಾಲಿ ನಡೆಯಲಿದೆ. ಮೊದಲ ಹಂತದಲ್ಲಿ ಹಾಪುರ್‌, ಮೊರಾದಾಬಾದ್‌, ಸಹರಾನ್ಪುರ ಗಳಲ್ಲಿ ರ್ಯಾಲಿ ಆಯೋಜಿಸಲಾಗುತ್ತದೆ. 

ಅಂಜಿಕೆ ಉಂಟಾಗಿದೆ 
ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯಿಂದ ಬಿಜೆಪಿ ಕಾರ್ಯಕರ್ತರಿಗೆ ಅಂಜಿಕೆ ಉಂಟಾಗಿದೆ. ಹೀಗಾಗಿ ಅವರು ನಮ್ಮ ಮೈತ್ರಿ ಕೂಟಕ್ಕೆ ಸೇರಲು ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಅಖೀಲೇಶ್‌ ಯಾದವ್‌ ಹೇಳಿದ್ದಾರೆ. 

ಈ ನಡುವೆ, ಚುನಾವಣಾ ಪೂರ್ವ ಮೈತ್ರಿಗೆ ಒಪ್ಪಿಕೊಳ್ಳದಿದ್ದರೆ ಪಕ್ಷಗಳನ್ನು ಬಗ್ಗು ಬಡಿಯುವುದಾಗಿ ಹೇಳಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿಕೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಸೇನೆಯನ್ನು ಸೋಲಿಸುವ ವ್ಯಕ್ತಿ ಇನ್ನೂ ಹುಟ್ಟಿಲ್ಲ ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಪ್ರಬಲ ಸ್ಪರ್ಧೆ ನೀಡಲಿದೆ. ದೇಶ ಈಗ ಮೈತ್ರಿ ರಾಜಕಾರಣದ ಕಡೆಗೆ ಹೊರಳಿಕೊಳ್ಳುತ್ತಿದೆ. ಉತ್ತರ ಪ್ರದೇಶಾದ್ಯಂತ ಬಿಜೆಪಿ ಅಲೆ ಇದೆ ಎಂದು ಆ ಪಕ್ಷದ ನಾಯಕರು ತಿಳಿದುಕೊಂಡಿದ್ದಾರೆ.
– ಓಂ ಪ್ರಕಾಶ್‌ ರಾಜ್‌ಭರ್‌ ಉ.ಪ್ರ.ಸಚಿವ 

ಈ ಮೈತ್ರಿಕೂಟವೇ ಅಪ್ರಸ್ತುತ. ಮಾಯಾವತಿಗೆ ಶರಣಾಗಿ ಹತ್ತು ಸ್ಥಾನಗಳನ್ನು ಅಖೀಲೇಶ್‌ ಯಾದವ್‌ ಪಡೆದಿರಬಹುದು. ಕನೌಜ್‌ ಲೋಕಸಭಾ ಸ್ಥಾನವನ್ನು ಗೆಲ್ಲುವುದು ಕೂಡ ಎಸ್‌ಪಿಗೆ ಕಷ್ಟವಾದೀತು.
– ಯೋಗಿ ಆದಿತ್ಯನಾಥ್‌ ಉ.ಪ್ರ.ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next