Advertisement

ಕೃಷ್ಣರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ಶುರು

05:08 PM Oct 13, 2022 | Team Udayavani |

ಮೈಸೂರು: ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಸಾಗಿದ ಬೆನ್ನ ಹಿಂದೆಯೇ ಮುಂದಿನ ಅಸೆಂಬ್ಲಿ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಉತ್ಸಾಹ ಗರಿಗೆದರಿದ್ದು ಇಲ್ಲಿನ ಕೃಷ್ಣರಾಜ ಕ್ಷೇತ್ರದಲ್ಲಿ ಈಗಲೇ ಸ್ಪರ್ಧೆ ಶುರುವಾಗಿದೆ.

Advertisement

ಕೃಷ್ಣರಾಜ ಕ್ಷೇತ್ರದಲ್ಲಿ ಬ್ರಾಹ್ಮಣ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೀರಶೈವ-ಲಿಂಗಾ ಯತರು, ಕುರುಬರು, ದಲಿತರು, ನಾಯಕರು, ಒಕ್ಕಲಿಗ ಸಮುದಾಯದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕುರುಬ ಸಮಾಜದ ಎಂ.ಕೆ. ಸೋಮಶೇಖರ್‌ ಈ ಕ್ಷೇತ್ರವನ್ನು 2004ರಲ್ಲಿ ಜೆಡಿಎಸ್‌ ನಿಂದ, 2013ರಲ್ಲಿ ಕಾಂಗ್ರೆಸ್‌ ನಿಂದ ಪ್ರತಿನಿಧಿಸಿದ್ದಾರೆ. ಹಾಲಿ ಬಿಜೆಪಿ ಶಾಸಕರಿದ್ದು ಅವರು ಈ ಕ್ಷೇತ್ರವನ್ನು ಈವರೆಗೆ ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ.

ಕಣಕ್ಕೆ ಧುಮುಕಲು ಸೋಮಶೇಖರ್‌ ಸಿದ್ಧ: ಕಾಂಗ್ರೆಸ್ಸಿನ ಸೋಮಶೇಖರ್‌ ಈ ಬಾರಿಯೂ ಕಣಕ್ಕೆ ಧುಮುಕಲು ಸಿದ್ಧರಾಗಿದ್ದಾರೆ. ಅವರಿಗೆ ಈಗ ಪಕ್ಷದಲ್ಲಿ ಟಿಕೆಟ್‌ ಗಾಗಿ ಬ್ರಾಹ್ಮಣ ಸಮಾಜದ ಎನ್‌. ಎಂ.ನವೀನ್‌ ಕುಮಾರ್‌, ವೀರಶೈವ-ಲಿಂಗಾಯತ ಸಮಾಜದ ಎಂ.ಪ್ರದೀಪ್‌ ಕುಮಾರ್‌ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ನವೀನ್‌ ಕುಮಾರ್‌ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಆರ್‌. ಮೋಹನ ಕುಮಾರ್‌ ಅವರ ಪುತ್ರ. ನವೀನ್‌ ಕುಮಾರ್‌ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸದಸ್ಯರನ್ನು ನೋಂದಾಯಿಸಿದ್ದಾರೆ. ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಕೋವಿಡ್‌ ಸಂದರ್ಭದಲ್ಲಿ ಬಡವರಿಗೆ ನೆರವಾಗಿದ್ದಾರೆ.

ಮತಗಳು ಕ್ರೋಡೀಕರಣವಾಗದಂತೆ ತಡೆಯಬಹುದು: ಕಾಂಗ್ರೆಸ್‌ ನಿಂದ ಬ್ರಾಹ್ಮಣ ಸಮಾಜದವರಿಗೆ ಟಿಕೆಟ್‌ ನೀಡಿದರೆ ಅನುಕೂಲಕರ ಎಂಬ ವಾದವನ್ನು ಟಿಕೆಟ್‌ ಆಕಾಂಕ್ಷಿ ನವೀನ್‌ ಕುಮಾರ್‌ ಪಕ್ಷದ ನಾಯಕರ ಮುಂದಿಟ್ಟಿದ್ದಾರೆ. ಕ್ಷೇತ್ರ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಸಮಾಜದವರಿದ್ದಾರೆ.

ಈ ಸಮಾಜದವರಿಗೆ ಟಿಕೆಟ್‌ ನೀಡಿದರೆ ಬ್ರಾಹ್ಮಣ ಸಮಾಜದ ಮತಗಳು ಬಿಜೆಪಿಗೆ ಕ್ರೋಡೀಕ ರಣವಾಗದಂತೆ ತಡೆಯಬಹುದು. ಆಗ ಬ್ರಾಹ್ಮಣ ಸಮಾಜದ ಮತಗಳು ಹಾಗೂ ಕಾಂಗ್ರೆಸ್‌ ಮತಗಳು ಸೇರಿಕೊಂಡು ಕಾಂಗ್ರೆಸ್‌ ಗೆಲುವಿನ ಹಾದಿ ಸುಗಮವಾಗಲಿದೆ ಎಂಬ ವಾದವನ್ನು ನವೀನ್‌ ಕುಮಾರ್‌ ಮುಂದಿಟ್ಟಿದ್ದಾರೆ. ಇದಕ್ಕೆ 2013ರಲ್ಲಿ ಬಿಜೆಪಿಯ ಎಸ್‌.ಎ.ರಾಮದಾಸ್‌ ಹಾಗೂ ಕೆಜೆಪಿಯ ಎಚ್‌.ವಿ.ರಾಜೀವ್‌ ಅವರ ಮಧ್ಯೆ ಬ್ರಾಹ್ಮಣ ಸಮಾಜದ ಮತಗಳು ವಿಭಜನೆ ಯಾಗಿ ಕಾಂಗ್ರೆಸ್‌ ಹೇಗೆ ಗೆಲುವು ಸಾಧಿಸಿತು ಎಂಬ ನಿದರ್ಶನವನ್ನು ನವೀನಕುಮಾರ್‌ ನೀಡುತ್ತಾರೆ.

Advertisement

ಸಮಾಜಕ್ಕೆ ಅವಕಾಶ ಕಲ್ಪಿಸ ಬೇಕು: ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಪ್ರದೀಪ್‌ ಕುಮಾರ್‌ ಒಮ್ಮೆ ಬಿಜೆಪಿಯಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಕಾಂಗ್ರೆಸ್‌ ಸೇರಿದ್ದಾರೆ. ಪ್ರದೀಪ್‌ ಕುಮಾರ್‌ ಅವರ ವಾದವೇ ಬೇರೆ. ಹಳೇ ಮೈಸೂರು ಭಾಗದ ಐದಾರು ಜಿಲ್ಲೆಗಳಲ್ಲಿ ವೀರಶೈವ-ಲಿಂಗಾಯತರಿಗೆ ಗುಂಡ್ಲುಪೇಟೆ ಹೊರತುಪಡಿಸಿ ಇನ್ನು ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಟಿಕೆಟ್‌ ನೀಡುವುದಿಲ್ಲ. ಕೃಷ್ಣರಾಜ ಕ್ಷೇತ್ರ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ-ಲಿಂಗಾಯತ ಸಮಾಜದವರು ಇದ್ದಾರೆ. ಇಲ್ಲಿ ತಮ್ಮ ಸಮಾಜಕ್ಕೆ ಅವಕಾಶ ಕಲ್ಪಿಸಬೇಕು. ಈ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಸಮಾಜದವರಿಗೆ ಟಿಕೆಟ್‌ ನೀಡಿದರೆ ಬಿಜೆಪಿ ಮತಗಳು ಒಡೆದು ಕಾಂಗ್ರೆಸ್‌ ಗೆಲುವಿನ ಹಾದಿ ಸುಗಮವಾಗಲಿದೆ ಎಂಬುದು ಪ್ರದೀಪ್‌ ಕುಮಾರ್‌ ಅವರ ವಾದ.

ಮಾಜಿ ಶಾಸಕ ಸೋಮಶೇಖರ್‌ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತರು. ಸಿದ್ದರಾಮಯ್ಯ ಅವರ ಜೊತೆ ಜೆಡಿಎಸ್‌ ನಿಂದ ಕಾಂಗ್ರೆಸ್‌ಗೆ ಬಂದವರು. ಆದರೆ, ಟಿಕೆಟ್‌ ಗಾಗಿ ಈ ಬಾರಿ ಅವರು ಪಕ್ಷದಲ್ಲೇ ಪ್ರಬಲ ಸ್ಪರ್ಧೆ ಎದುರಿಸಬೇಕಿದೆ. ಸೋಮಶೇಖರ್‌ ಈ ಕ್ಷೇತ್ರದಲ್ಲಿ ಐದು ಬಾರಿ ಕಣಕ್ಕೆ ಇಳಿದಿದ್ದಾರೆ. ಎರಡು ಬಾರಿ ವಿಜಯದ ನಗೆ ಬೀರಿದ್ದಾರೆ.

ಟಿಕೆಟ್‌ ಸಿಗುವ ವಿಶ್ವಾಸವಿದೆ
ಪಕ್ಷದಲ್ಲಿ ಟಿಕೆಟ್‌ ಕೇಳಲು ಪ್ರತಿಯೊಬ್ಬರೂ ಸ್ವತಂತ್ರರು. ನಾನು ಎರಡು ಬಾರಿ ಕ್ಷೇತ್ರವನ್ನು ಪ್ರತಿ ನಿಧಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಚುನಾವಣೆಯಲ್ಲಿ ಸೋತರೂ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ. ಟಿಕೆಟ್‌ ಸಿಗುವ ವಿಶ್ವಾಸವಿದೆ ಎನ್ನುತ್ತಾರೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌. ಸೋಮಶೇಖರ್‌, ನವೀನಕುಮಾರ್‌, ಪ್ರದೀಪ ಕು ಮಾರ್‌ ಅವರು ಕ್ಷೇತ್ರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಹೀಗೆ ಮತದಾರರ ಮನ ಗೆಲ್ಲಲು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

*ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next