ಬ್ಯಾಡಗಿ: ಸ್ವಧರ್ಮ ಪಾಲನೆ, ಪರಧರ್ಮ ಸಹಿಷ್ಣುತೆ ಮಾನವ ಧರ್ಮದ ಮೂಲಮಂತ್ರ. ಆದರೆ, ಸಮಾಜದಲ್ಲಿ ಧಾರ್ಮಿಕ ಸಂಘರ್ಷಗಳು ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಸರ್ವ ಜನಾಂಗಗಳ ಹಿತ ಬಯಸಬೇಕಾದ ಧರ್ಮಗಳು ತನ್ನದೇ ಹೆಚ್ಚೆಂಬ ಸ್ಪರ್ಧೆಗಿಳಿದಿರುವುದು ಅಪಾಯದ ಸಂಕೇತವಾಗಿದೆ. “ಮಾನವ ಧರ್ಮಕ್ಕೆ ಜಯವಾಗಲಿ- ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಪಂಚಪೀಠಗಳ ಘೋಷಣೆ ಸಾರ್ವತ್ರಿಕ ಸತ್ಯವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಸಭಾ ಮಂದಿರದಲ್ಲಿ ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ, ಪಂಚಾಚಾರ್ಯ ಯುಗಮಾನೋತ್ಸವದ ಅಂಗವಾಗಿ ನಡೆದ ಜಂಗಮ ವಟುಗಳ ಶಿವದೀಕ್ಷೆ (ಅಯ್ನಾಚಾರ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾಸ್ತಿಕ ಮನೋಭಾವದ ಅನಾವರಣ: ಧಾರ್ಮಿಕ ಆಚರಣೆ ಮರೆತು ಹೆಜ್ಜೆಯನ್ನಿಡುತ್ತಿರುವ ಸಮಾಜ ಅಪಾಯದ ಅಂಚು ತಲುಪಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯ ನೆಪದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ತರ್ಕಿಸುವ ಮತ್ತು ಪ್ರಶ್ನಿಸುವ ಗುಣ ರೂಢಿಸಿಕೊಳ್ಳುತ್ತಿರುವ ಸೋಕಾಲ್ಡ್ ಬುದ್ಧಿಜೀವಿಗಳು ತಮ್ಮಲ್ಲಿರುವ ನಾಸ್ತಿಕ ಮನೋಭಾವದ ಮೂಲಕ ತಮ್ಮ ಸುಂದರ ಬದುಕನ್ನೇ ನಶ್ವರತೆಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಧರ್ಮ ಬದುಕಿಗೆ ಮಾರ್ಗ: ಮುಂಜಾನೆ ಏದ್ದೇಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ನಿತ್ಯ ಪಾಲಿಸಬೇಕಾದ ಆಚಾರ ವಿಚಾರ, ಉಡುಗೆ ತೊಡುಗೆ, ಆಹಾರ ಪದ್ಧತಿ, ಜೀವನದಲ್ಲಿ ನೈತಿಕ ಮೌಲ್ಯ ಕಾಪಾಡಿಕೊಂಡು, ಪರೋಪಕಾರ ಅಳವಡಿಸಿಕೊಂಡು ಮನುಷ್ಯ ಹೀಗೆಯೇ ಬದುಕಬೇಕು ಎಂಬುದರ ಕುರಿತು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಕಾಯಕ ಬಿಡಬೇಡಿ: ಜಂಗಮ ವಟುಗಳು ಕಾಯಕ ಮಾಡಬೇಕಿದೆ. ಸನಾತನ ಕಾಲದಿಂದಲೂ ಜಂಗಮರು ಧಾರ್ಮಿಕ ಭಿûಾಟನೆ ಕಾಯಕ ನಡೆಸಿದ್ದಾರೆ. ಶಿವದೀಕ್ಷೆ ಬೋಧಿಸಿದ ವೇಳೆ ವಟುಗಳಿಗೆ ಶಿವಾಚಾರ್ಯರು ನಿತ್ಯ ಅನುಸರಿಸುವ ನಿಯಮ ತಿಳಿಸಿದ್ದಾರೆ. ಅಲ್ಲದೇ, ಶಿವದೀಕ್ಷೆ ನೀಡುವಾಗ ಯತಿಗಳು ಆತನಿಗೆ ಧರ್ಮ ಸಂಸ್ಕಾರ, ಗುರು ಬೋಧನೆ, ಜೀವನ ಮುಕ್ತಿ ಕೆಲ ಪದ್ಧತಿಗಳನ್ನು ತಿಳಿಸಿದ್ದು, ಅದನ್ನು ಪಾಲಿಸುವಂತೆ ಸಲಹೆ ನಿಡಿದರು.
ಧಾರ್ಮಿಕ ಭಿಕ್ಷೆ: ಸನಾತನ ಕಾಲದಿಂದಲೂ ಜಂಗಮರು ಧಾರ್ಮಿಕ ಭಿಕ್ಷಾಟನೆ ಪರಂಪರಾಗತ ಮುಂದುವರೆದುಕೊಂಡು ಬಂದಿದ್ದು, ಕಾರ್ಯಕ್ರಮದಲ್ಲಿ 43 ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಗಿದ್ದು, ಅಯ್ನಾಚಾರ ಪಡೆದ ಎಲ್ಲರೂ ಪಟ್ಟಣದ ವಿವಿಧ ಮನೆಗಳಿಗೆ ತೆರಳಿ ದವಸ ಧಾನ್ಯ ಭಿಕ್ಷೆ ಪಡೆದರು.
ಶಿಕಾರಿಪುರ ತಾಲೂಕು ದಿಂಡದಹಳ್ಳಿ ಷ.ಬ್ರ.ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಹಾಗೂ ಮುಪ್ಪಿನಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಅಧ್ಯಕ್ಷೆ ಸರೋಜ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸ್ಥಾಯಿ ಸಮಿತಿ ಚೇರ್ಮನ್ ಬಾಲಚಂದ್ರ ಪಾಟೀಲ, ಸದಸ್ಯರಾದ ಕವಿತಾ ಸೊಪ್ಪಿನಮಠ, ವಿನಯ್ ಹಿರೇಮಠ, ಮುಖಂಡ ಎಸ್.ಆರ್.ಪಾಟೀಲ, ವರ್ತಕರಾದ ಶಂಭಣ್ಣ ಶಿರೂರ, ಎಲ್.ಎಂ.ಪಾಟೀಲ, ಬೇಡಜಂಗಮ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜಯ್ಯ ಹಿರೇಮಠ, ಗಂಗಾಧರ ಶಾಸ್ತ್ರಿ ಹಿರೇಮಠ, ರಾಚಯ್ಯ ಓದಿಸೋಮಠ, ಗಿರೀಶ ಇಂಡಿಮಠ, ಮೃತ್ಯುಂಜಯ್ಯ ಹಿರೇಮಠ, ಎಸ್. ಎಂ.ಬೂದಿಹಾಳಮಠ ಇತರರಿದ್ದರು.