ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸು ವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಮುಖಂಡರು ಒಕ್ಕೊರಲಿನಿಂದ ಒತ್ತಾಯ ಮಾಡಿದ್ದಾರೆ. ಶುಕ್ರವಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆ ಸಿದ್ದರಾಮಯ್ಯ ಕರೆದಿದ್ದ ಕೊಪ್ಪಳ ಜಿಲ್ಲಾ ಮುಖಂಡರ ಸಭೆಯಲ್ಲಿ ಅವರನ್ನೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಜಿಲ್ಲಾ ಮುಖಂಡರ ಮನವಿಯನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದ್ದು, ನನ್ನ ಹೆಸರನ್ನು ಬಿಟ್ಟು ಬೇರೆ ಯಾರನ್ನಾದರೂ ಸೂಚಿಸಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದರೆ, ಕಣಕ್ಕಿಳಿಯಲು ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಮುಕ್ತವಾಗಿ ಇಟ್ಟುಕೊಂಡಿದ್ದಾರೆ. ಅದೇ ಕಾರಣಕ್ಕೆ ಕೊಪ್ಪಳ ಜಿಲ್ಲಾ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗಾಯತ-ಕುರುಬ ಪೈಪೋಟಿ: ಕೊಪ್ಪಳ ಕ್ಷೇತ್ರಕ್ಕೆ ಲಿಂಗಾಯತ ಮತ್ತು ಕುರುಬ ಸಮುದಾಯದವರಿಂದ ಟಿಕೆಟ್‌ಗೆ ಬೇಡಿಕೆ ಇದ್ದು, ಲಿಂಗಾಯತ ಸಮುದಾಯದಿಂದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಅಮರೇಗೌಡ ಬಯ್ನಾಪುರ ಅವರ ಅಣ್ಣನ ಮಗ ಶರಣಗೌಡ ಬಯ್ನಾಪುರ, ಕುರುಬ ಸಮುದಾಯದಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ರಾಜಶೇಖರ್ ಹಿಟ್ನಾಳ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಹೈ-ಕ ಭಾಗದಲ್ಲಿ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ಮೀಸಲಾಗಿದ್ದು, ಬೀದರ್ ಹಾಗೂ ಕೊಪ್ಪಳ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ.ಒಂದು ವೇಳೆ, ಬೀದರ್ ಕ್ಷೇತ್ರವನ್ನು ಲಿಂಗಾಯತ ಸಮುದಾ ಯದವರಿಗೆ ನೀಡಿದರೆ, ಕೊಪ್ಪಳದಲ್ಲಿ ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಬಾಗಲಕೋಟೆಯಲ್ಲಿ ಡಜನ್ ಆಕಾಂಕ್ಷಿಗಳು
ಬಾಗಲಕೋಟೆ ಕ್ಷೇತ್ರದ ಕುರಿತಂತೆಯೂ ಸಿದ್ದರಾಮಯ್ಯನವರು ಶುಕ್ರವಾರ ಜಿಲ್ಲಾ ಮುಖಂಡರ ಸಭೆ ನಡೆಸಿದ್ದು, 12 ಜನ ಟಿಕೆಟ್ ಆಕಾಂಕ್ಷಿಗಳು ವೈಯಕ್ತಿಕವಾಗಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಆದರೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ತಮ್ಮ ಪತ್ನಿಗೆ ಟಿಕೆಟ್ ನೀಡುವಂತೆ ಎಲ್ಲರೆದುರೇ ಬೇಡಿಕೆ ಇಟ್ಟಿದ್ದಾರೆ. ಅವರ ಹೊರತಾಗಿ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ರಕ್ಷಿತಾ ಈಟಿ ಹಾಗೂ ಸತೀಶ್ ಉದಪುಡಿ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬಂದಿದ್ದು, ಮೂವರ ಹೆಸರನ್ನು ಸಿದ್ದರಾಮಯ್ಯನವರು ಸ್ಕ್ರೀನಿಂಗ್ ಕಮಿಟಿಗೆ
ಕಳುಹಿಸಿಕೊಡುತ್ತಾರೆ ಎಂದು ತಿಳಿದು ಬಂದಿದೆ.