Advertisement

ತಾಕತ್ತಿದ್ದರೆ ಮೊಳಕಾಲ್ಮೂರು ಕ್ಷೇತ್ರದಲ್ಲೇ ಸ್ಪರ್ಧಿಸಿ

03:46 PM May 03, 2022 | Team Udayavani |

ಮೊಳಕಾಲ್ಮೂರು: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಸಚಿವ ಬಿ. ಶ್ರೀರಾಮುಲು ತಾಕತ್ತಿದ್ದರೆ ಮುಂಬರುವ ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಕಾಂಗ್ರೆಸ್‌ ಮುಖಂಡ ಡಾ| ಬಿ. ಯೋಗೇಶ್‌ಬಾಬು ಸವಾಲೆಸೆದರು.

Advertisement

ತಾಲೂಕಿನ ಹಾನಗಲ್‌ ಗ್ರಾಮದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬಿ. ಶ್ರೀರಾಮುಲು ಕೆಲ ದಿನಗಳ ಹಿಂದೆ ಈ ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿಯಲು ಕಾಂಗ್ರೆಸ್‌ ಕಾರಣವಾಗಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ತಾಕತ್ತಿದ್ದರೆ ಕಾಂಗ್ರೆಸ್‌ನವರು ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಇದು ತಾಕತ್ತಿನ ಪ್ರಶ್ನೆಯಲ್ಲ. ನಮ್ಮ ಕ್ಷೇತ್ರದ ಮತದಾರರು ಸಚಿವ ಬಿ. ಶ್ರೀರಾಮುಲು ಉಪ ಮುಖ್ಯಮಂತ್ರಿಯಾಗಿ ಎಸ್‌ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಕಲ್ಪಿಸುತ್ತಾರೆಂದು ಭರವಸೆ ನೀಡಿದ್ದರಿಂದ ಮತಹಾಕಿದ್ದಾರೆ. ಕ್ಷೇತ್ರದ ಜನರಿಗೆ ಈಗ ತಪ್ಪಿನ ಅರಿವಾಗಿದ್ದು, ಮುಂದೆ ಆ ತಪ್ಪನ್ನು ಮಾಡಲಾರರು ಎಂದರು.

ಶ್ರೀರಾಮುಲುರವರು ಸುಳ್ಳನ್ನು ಬಂಡವಾಳ ವನ್ನಾಗಿಟ್ಟುಕೊಂಡು ಕ್ಷೇತ್ರದ ಜನತೆಯ ಜೊತೆ ಆಟವಾಡುವುದು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಗೆದ್ದ ನಂತರ ಜಲೋತ್ಕರ್ಷ ಯೋಜನೆಯಡಿ ಹಳ್ಳಿ ಗೊಂದರಂತೆ ನೂರಾರು ಬೋರ್‌ವೆಲ್‌ ಗಳನ್ನು ಹಾಕಿಸುತ್ತೇನೆಂದು ನಂಬಿಸಿ ಮರೆತಿದ್ದಾರೆ. ಕ್ಷೇತ್ರದಲ್ಲಿ ಮತಗಳನ್ನು ಪಡೆದು ಶಾಸಕರಾಗಿ ಸಚಿವರಾಗಿರುವ ಇವರು, ಕ್ಷೇತ್ರದ ಜನರು ಬಳ್ಳಾರಿಗೆ ಹೋದಾಗ ಮನೆ ಗೇಟ್‌ ನಲ್ಲಿ ನಿಂತು ಕಾಣಲಾಗದೆ ವಾಪಾಸ್‌ ಬರುವಂತಹ ದುಸ್ಥಿತಿ ಇದೆ. ಕ್ಷೇತ್ರದಲ್ಲಿನ ಶಾಸಕರ ಭವನಕ್ಕೆ ಎಷ್ಟು ಬಾರಿ ಆಗಮಿಸಿದ್ದೀರಿ ಎಂದು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಈವರೆಗೂ ಹೊಸ ಶಾಲಾ-ಕಾಲೇಜು ಮಂಜೂರು ಮಾಡಿಸದೆ, ಶಾಲಾಭಿವೃದ್ಧಿಗೆ ಯಾವುದೇ ಅನುದಾನ ನೀಡದೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆಂದು ಹೇಳುತ್ತಿರುವುದಕ್ಕೆ ನಾಚಿಕೆಯಾಗಬೇಕು.ಇವೆಲ್ಲವನ್ನೂ ಜನತೆ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಪಟೇಲ್‌ ಜಿ. ಪಾಪನಾಯಕ, ಗ್ರಾಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ, ಕರಿಬಸಪ್ಪ, ಪಪಂ ಸದಸ್ಯ ನಬಿಲ್‌ ಅನ್ಸಾರ್‌, ಉಪಾಧ್ಯಕ್ಷ ರಾಮಮೂರ್ತಿ, ಪರಿಶಿಷ್ಟ ವರ್ಗ ಘಟಕದ ಅಧ್ಯಕ್ಷ ಟಿ.ಎಸ್. ಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತ ಪ್ರಹ್ಲಾದ, ಯುವ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಪ್ಪ, ಮುಖಂಡರಾದ ಜಗದೀಶ್‌, ಶಿವಲಿಂಗಪ್ಪ, ಎಂ.ಪಿ. ನಾಗರಾಜ್‌, ದೊಡ್ಡೋಬ ನಾಯಕ, ವೈ.ಡಿ. ಕುಮಾರಸ್ವಾಮಿ, ರಾಮಾಂಜನೇಯ, ಬಸವರಾಜ್‌, ಲೋಹಿತ್‌ಕುಮಾರ್‌, ಶರತ್‌, ಮಂಜಣ್ಣ, ಆಂಜನೇಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next