Advertisement

ಲಿಂಗಾಯತ ಡಿಸಿಎಂ ಹುದ್ದೆಗೆ ಪೈಪೋಟಿ

12:09 PM May 22, 2018 | |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಲಿಂಗಾಯತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಎಂ.ಬಿ.ಪಾಟೀಲ್‌, ಎಸ್‌.ಆರ್‌.ಪಾಟೀಲ್‌, ಶಾಮನೂರು ಶಿವಶಂಕರಪ್ಪ ನಡುವೆ ಪೈಪೋಟಿ ಪ್ರಾರಂಭವಾಗಿದೆ.

Advertisement

ಮೂವರೂ ನಾಯಕರು ಹೈಕಮಾಂಡ್‌ ಹಾಗೂ ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದು, ಸೋಮವಾರ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ.ಪಾಟೀಲ್‌ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಈ ಮಧ್ಯೆ, ಎಂ.ಬಿ.ಪಾಟೀಲ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬಾರದು ಎಂದು ಇಂಡಿ ಶಾಸಕ ಯಶವಂತರಾಯಗೌಡ ವಿ.ಪಾಟೀಲ್‌ ಹಾಗೂ ಬಸವನಬಾಗೇವಾಡಿಯ ಶಿವಾನಂದ ಪಾಟೀಲ್‌  ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸಂಪುಟದಲ್ಲಿ ಸ್ಥಾನ ಪಡೆಯಲು ಕಾಂಗ್ರೆಸ್‌ ಶಾಸಕರು ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಮೊರೆ ಹೋಗಿದ್ದಾರೆ. ಜಾತಿವಾರು, ಪ್ರಾದೇಶಿಕವಾರು ಆದ್ಯತೆ ಕೋಟಾದಡಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಗೆದ್ದಿರುವ ಜಮೀರ್‌ ಅಹಮದ್‌  ಸಹ ಸೋಮವಾರ ಡಾ.ಜಿ.ಪರಮೇಶ್ವರ್‌ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡಿ, ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನಕ್ಕೆ ಮನವಿ ಮಾಡಿದರು.  ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದರು. ಇಬ್ಬರೂ ನಾಯಕರು ಹೈಕಮಾಂಡ್‌ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು ಎಂದು ಹೇಳಲಾಗಿದೆ.

Advertisement

ಈ ನಡುವೆ, ಮಾಜಿ ಸಚಿವ ಎಚ್‌.ಡಿ.ರೇವಣ್ಣ  ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ರೇವಣ್ಣ  ಸಮ್ಮಿಶ್ರ ಸರ್ಕಾರದ ರೂಪುರೇಷೆಗಳ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ಹೇಳಲಾಗಿದೆ. ಮತ್ತೂಂದೆಡೆ ರೋಷನ್‌ಬೇಗ್‌ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಡಿಸಿಎಂ ಸ್ಥಾನ ನೀಡಲು ಒತ್ತಾಯ: ವೀರಶೈವ ಲಿಂಗಾಯತರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಒಕ್ಕೂಟ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ರಾಜ್ಯದಲ್ಲಿ ಒಂದೂವರೆ ಕೋಟಿ ಜನ ವೀರಶೈವ ಲಿಂಗಾಯಿತರಿದ್ದು ಈ ಬಾರಿಯ ಚುನಾವಣೆಯಲ್ಲಿ 60 ಶಾಸಕರು ಚುನಾಯಿತರಾಗಿದ್ದಾರೆ. ಹಾಗಾಗಿ ಈ ಮೈತ್ರಿ ಸರ್ಕಾರದ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ವೀರಶೈವ ಲಿಂಗಾಯಿತರಿಗೆ ಕೊಡಬೇಕು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next