Advertisement

ಮಾರುಕಟ್ಟೆ ದರದಂತೆ ಪರಿಹಾರ ನೀಡಿ

12:19 AM Feb 18, 2020 | Lakshmi GovindaRaj |

ಬೆಂಗಳೂರು: ಉದ್ದೇಶಿತ ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆಯ ಭೂ ಸ್ವಾಧೀನಕ್ಕೆ ಮಾರುಕಟ್ಟೆ ದರದಂತೆ ಪರಿಹಾರ ನೀಡುವಂತೆ ಆಗ್ರಹಿಸಿದ ಭೂ ಮಾಲೀಕರಿಗೆ ಸರ್ಕಾರದ ಸ್ಪಂದನೆ ಸಿಗದ ಹಿನ್ನೆಲೆ ಹೋರಾಟವನ್ನು ಅಹೋರಾತ್ರಿ ನಡೆಸಲು ನಿರ್ಧರಿಸಿದ್ದಾರೆ.

Advertisement

ರೈತ ಮುಖಂಡರು ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತೀವ್ರಗೊಂಡ ಪರಿಣಾಮ ಬಿಡಿಎ ಆಯುಕ್ತ ಡಾ.ಜಿ.ಸಿ.ಪ್ರಕಾಶ್‌ ರೈತರ ನಿಯೋಗವನ್ನು ಸಿಎಂ ಬಳಿಗೆ ಕರೆದುಕೊಂಡು ಹೋಗಿ ದ್ದು, ಸಕಾರಾತ್ಮಕ ಸ್ಪಂದನೆ ಸಿಗದಿದ್ದರಿಂದ ರೈತರು ಬಿಡಿಎ ಕಚೇರಿ ಮುಂಭಾಗ ಧರಣಿ ಮುಂದುವರಿಸಿದ್ದಾರೆ.

ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪೆರಫ‌ರಲ್‌ ರಿಂಗ್‌ ರಸ್ತೆ ಅಭಿವೃದ್ಧಿ ಪಡಿಸಲು 2004ರಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿದ್ದು, 16 ವರ್ಷ ಕಳೆದರೂ ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಗೆ ಉತ್ತಮ ಬೆಲೆ ನಿಗದಿ ಮಾಡಿಲ್ಲ. ಈ ಜಮೀನನ್ನು ಮಾರಾಟ ಮಾಡುವಂತಿಲ್ಲ. ಉಳುಮೆಯೂ ಮಾಡುವಂತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಸಿಲುಕಿದ್ದು, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ರೈತರ ಪರಿಹಾರ ವಿಷಯ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ತುಮಕೂರು ರಸ್ತೆಯ ಮಾದನಾಯಕಹಳ್ಳಿಯಿಂದ ಹೊಸೂರು ರಸ್ತೆವರೆಗೆ 66 ಕಿ.ಮೀ ಉದ್ದದ ಪೆರಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು 1810 ಎಕರೆ ಭೂ ಸ್ವಾಧೀನಕ್ಕೆ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, 16 ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಯೋಜನೆ ರದ್ದು ಮಾಡಿ, ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಸರ್ವೇ ಮಾಡಿ ಜಮೀನಿನಲ್ಲಿ ನೆಟ್ಟ ಕಲ್ಲುಗಳನ್ನು ತಂದು ಬಿಡಿಎ ಕಚೇರಿ ಮುಂದೆ ಹಾಕಲಾಗುವುದು. ಜಮೀನು ದಾಖಲಾತಿ ತಿದ್ದುಪಡಿ ಮಾಡದಿದ್ದರೆ ಕೋರ್ಟ್‌ ಮೆಟ್ಟಿ ಲೇರಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಸಿಎಂ ಭೇಟಿ ಮಾಡಿದ ನಿಯೋಗ: ರೈತ ಮುಖಂಡರ ನಿಯೋಗ ಸೋಮವಾರ 3.30ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದನೆ ಸಿಗದ ಹಿನ್ನೆಲೆ ನ್ಯಾಯ ಸಿಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ.

ರೈತರನ್ನು ಸಮಾಧಾನ ಮಾಡಲು ಬಜೆಟ್‌ ನಲ್ಲಿ ಪೆರಫೆರಲ್‌ ರಿಂಗ್‌ ರಸ್ತೆಗಾಗಿ ಸರ್ಕಾರ ಅನುದಾನ ಮೀಸಲಿಡುತ್ತಿದೆ. ಆದರೆ, ಭೂಮಿಗೆ ಬೆಲೆ ನಿಗದಿ ಮಾಡಿಲ್ಲ. 16 ವರ್ಷದಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಈಗಾಗಲೇ ನಮ್ಮ ಜಮೀನನ್ನು ಸರ್ವೇ ಮಾಡಲಾಗಿದ್ದು, ಮಾರಾಟ ಮಾಡಲು ತೊಂದರೆಯಾಗಿದೆ. ಈ ಸಮಸ್ಯೆ ಬಗೆಹರಿಯುವವರೆಗೂ ಧರಣಿ ಕೈ ಬಿಡುವುದಿಲ್ಲ.
-ಈಶ್ವರ ರೆಡ್ಡಿ, ರೈತ

Advertisement

Udayavani is now on Telegram. Click here to join our channel and stay updated with the latest news.

Next