Advertisement
ಹೊಸದಾಗಿ ಮನೆ ಕಟ್ಟಿದವರೊಬ್ಬರು ಗೃಹಪ್ರವೇಶಕ್ಕೆ ಕರೆಯಲು ಬಂದಿದ್ದರು. ಹೊಸ ಮನೆ ಕಟ್ಟಿದ ಸಂಭ್ರಮದ ಬದಲಾಗಿ ಗಂಡ ಹೆಂಡತಿ ಮುಖದಲ್ಲಿ ದುಗುಡದ ಕಳೆ ಇತ್ತು. ಇದು ಕೇವಲ ನನ್ನ ಊಹೆಯೂ ಇರಬಹುದು ಎನ್ನಿಸಿದರೂ ಕೇಳಿದೆ; ”ಯಾಕೋ ತುಂಬಾ ಸುಸ್ತಾದವರ ಹಾಗಿದ್ದೀರಿ. ಓಡಾಟ ಜಾಸ್ತಿನಾ?’ ಸುಸ್ತಾದದ್ದು ನಿಜ, ಓಡಾಟ ಅಲ್ಲ. ಮನೆ ಕಟ್ಟಿ ಆದ ಸುಸ್ತು. ಕೈ ಖಾಲಿ ಆಗಿದೆ… ಗಂಡ ಇನ್ನೂ ಹೇಳಲು ತೊಡಗಿದ. ಹೆಂಡತಿ ಬಾಯಿ ಮುಚ್ಚಿಸಿದಳು.
Related Articles
Advertisement
ಆ ಊರಿನಲ್ಲಿ ಎಲ್ಲರೂ ತಕ್ಕ ಮಟ್ಟಿಗೆ ಇದ್ದಾರೆ. ಆ ಊರಿಗೆ ಒಬ್ಬ ಸ್ವಾಮೀಜಿ ಬರುತ್ತಾರೆ. ಆ ಊರಿನ ಜನರೆಲ್ಲರೂ ಹೋಗಿ ಸಹಜವಾಗಿಯೇ ಅದು ಬೇಕು ಇದು ಬೇಕು ಎಂದು ಸ್ವಾಮೀಜಿಯನ್ನು ಕೇಳುತ್ತಿದ್ದರು. ಒಂದು ದಿನ ಸ್ವಾಮೀಜಿ ಎಲ್ಲರನ್ನೂ ಕರೆದು ಹೇಳುತ್ತಾರೆ; ನೋಡಿ, ನಾನು ನೀವು ಕೇಳಿದ್ದನ್ನೆಲ್ಲ ಕೊಡುತ್ತೇನೆ. ನಿಮಗೆ ಏನು ಬೇಕೋ ಅದನ್ನು ಒಂದು ಚೀಟಿಯಲ್ಲಿ ಬರೆದು ಈ ದೊಡ್ಡ ಬಾಕ್ಸ್ ಗೆ ಹಾಕಿ ಅಂದರು. ಬಹಳಷ್ಟು ಜನ ಈ ಮಾತನ್ನು ನಂಬಲಿಲ್ಲ.
ಕೇಳಿದ್ದೆಲ್ಲ ಆಗುವುದು ಹೇಗೆ? ಸಾಧ್ಯವೇ ಇಲ್ಲ. ಆದರೂ ಹೇಗಿದ್ದರೂ ಕೇಳಿದ್ದಾರಲ್ಲಾ ಅಂದು ಕೊಂಡ್ರು. ತಮಗೆ ಏನೇನು ಬೇಕೋ ಅದನ್ನೆಲ್ಲ ಬರೆದು ಒಂದು ಡಬ್ಬಿಯಲ್ಲಿ ಹಾಕಿದರು. ಆ ಊರಿನಲ್ಲಿರುವ ಒಬ್ಬ ಭಿಕ್ಷುಕ ಮಾತ್ರ ಏನೂ ಬರೆಯಲಿಲ್ಲ. ಮಾರನೇ ದಿನ ಬೆಳಗ್ಗೆ ಪ್ರತಿಯೊಬ್ಬರಿಗೂ ಅವರು ಏನೇನು ಬರೆದಿದ್ದರೋ ಅದೆಲ್ಲವೂ ಸಿಗುತ್ತದೆ. ಮನೆ, ಕಾರು, ಒಡವೆ, ಬಂಗಾರ ಹೀಗೆ, ಸ್ವಲ್ಪ ಹೊತ್ತು ಎಲ್ಲರಿಗೂ ಖುಷಿಯೋ ಖುಷಿ. ಆದರೆ ಕೆಲವೇ ಕ್ಷಣದಲ್ಲಿ ಅವರ ಖುಷಿ ಮಾಯವಾಯಿತು.
ಎಲ್ಲರ ಅಳಲು ಒಂದೇ “ಅಯ್ಯೋ, ನಾನು ಕೇಳುವುದು ಕೇಳಿದೆ, ಪಕ್ಕದ ಮನೆಯವರ ಹಾಗೆ ದೊಡ್ಡ ಮನೆ ಕೇಳಬಾರದಿತ್ತಾ? ಇನ್ನೊಬ್ಬರು ಕೇಳಿದಂತೆ ಜಾಸ್ತಿ ಬಂಗಾರ ಕೇಳಬೇಕಿತ್ತು, ಇಷ್ಟು ಚಿಕ್ಕ ಕಾರು ಯಾಕೆ ಕೇಳಿದೆ? ಒಂದೇ ಕಾರು ಕೇಳುವ ಬದಲು ಎರಡು ಕಾರು ಕೇಳಬೇಕಿತ್ತು. ಹೀಗೆ ಬಯಸಿದ್ದೆಲ್ಲ ಬಂದರೂ ಅವರೊಳಗೆ ಇನ್ನೂ ಅತೃಪ್ತಿ ಹಾಗೇ ಇತ್ತು. ಆ ಭಿಕ್ಷುಕ ಒಬ್ಬನೇ ಎಂದಿನಂತೆ ಖುಷಿಯಾಗಿ ಇದ್ದ.
ನಮ್ಮಲ್ಲಿ ಏನಿದೆಯೋ ಅದಕ್ಕಾಗಿ ಖುಷಿ ಪಡದೆ, ಇರುವುದರಲ್ಲಿ ಸಂತೃಪ್ತಿ ಪಡದಿದ್ದರೆ ಎಷ್ಟಿದ್ದರೂ ನೆಮ್ಮದಿ ಇರುವುದಿಲ್ಲ. ನಾವು ಎಷ್ಟು ದುಡಿಯುತ್ತೇವೆ ಎನ್ನುವುದು ಎಷ್ಟು ಮುಖ್ಯವೋ, ಹೇಗೆ ಬದುಕುತ್ತೇವೆ ಅನ್ನುವುದು ಅಷ್ಟೇ ಮುಖ್ಯ. ಗುಣಮಟ್ಟದ ಜೀವನ ಅಂದರೆ ಅತ್ಯುತ್ತಮ ವಸ್ತುಗಳನ್ನು ಹೊಂದುವುದಲ್ಲ. ಬದಲಾಗಿ ಹೆಚ್ಚು ಹೆಚ್ಚು ಸಂತೋಷದಿಂದ ಇರುವುದು. ಸಂತೋಷದ ಗುಟ್ಟು ಕಡಿಮೆ ಖರ್ಚು ಮಾಡುವುದರಲ್ಲಿದೆ. ಇದನ್ನೇ ಇನ್ನೊಂದು ರೀತಿಯಿಂದ ನೋಡುವುದಾದರೆ ಸರಳ ಜೀವನದಲ್ಲಿ ಇದೆ.
* ಸುಧಾಶರ್ಮ ಚವತ್ತಿ