Advertisement

Tunnel road: ಟನೆಲ್‌ ರಸ್ತೆ ನಿರ್ಮಾಣಕ್ಕೆ ಕಂಪನಿಗಳು ಸಿದ್ಧ

03:39 PM Aug 15, 2023 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಯಲ್ಲಿ ಅದರಲ್ಲೂ ವಿಶೇಷವಾಗಿ ಸುರಂಗ ಮಾರ್ಗ ನಿರ್ಮಾಣದಲ್ಲಿ ಸಕ್ರಿಯವಾಗಿರುವ ಕಂಪನಿಗಳು ಈಗ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಟನೆಲ್‌ ರಸ್ತೆ ನಿರ್ಮಿಸಲು ಆಸಕ್ತಿ ತೋರಿಸುತ್ತಿವೆ. ಆ ಮೂಲಕ ಮೆಟ್ರೋದಲ್ಲಿನ ಅನುಭವವನ್ನೆಲ್ಲ “ಸುರಂಗ ರಸ್ತೆ’ಗೆ ಧಾರೆಯೆರೆಯಲು ಮುಂದೆ ಬಂದಿವೆ. ಈ ಸಂಬಂಧ ಆಗಲೇ ಎರಡು- ಮೂರು ಕಂಪನಿಗಳು ಸರ್ಕಾರವನ್ನು ಸಂಪರ್ಕಿಸಿವೆ.

Advertisement

ಎರಡನೇ ಹಂತದಲ್ಲಿ ಮೆಟ್ರೋ ಮಾರ್ಗದ ಸುರಂಗ ಕೊರೆಯುತ್ತಿರುವ ಅಫಾRನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈ.ಲಿ. ಹಾಗೂ ಅದೇ ಸುರಂಗ ಮಾರ್ಗಕ್ಕೆ ಸಲಹೆ ನೀಡುತ್ತಿರುವ ಏಜೆನ್ಸಿ ಅಮೆರಿಕ ಮೂಲದ ಎಇಕಾಮ್‌ ಇನ್‌ಫ್ರಾಸ್ಟ್ರಕ್ಚರ್‌ ಕನ್ಸಲ್ಟಿಂಗ್‌ ಸಂಸ್ಥೆಯು ನಗರದ ಸಂಚಾರ ದಟ್ಟಣೆಗೆ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಟನೆಲ್‌ ರಸ್ತೆ ನಿರ್ಮಾಣದಲ್ಲಿ ತಾವು ಆಸಕ್ತಿ ಹೊಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನೀಡಿವೆ.

ಅಫ್ಕಾನ್ಸ್‌ ಹೇಳಿಕೆ: “ಈಗಾಗಲೇ ನಗರದಲ್ಲಿ ನಾವು ವರ್ಷದಿಂದ ಸುರಂಗ ಮಾರ್ಗ ನಿರ್ಮಿಸುತ್ತಿದ್ದೇವೆ. ಇಲ್ಲಿನ ಮಣ್ಣಿನ ಗುಣಲಕ್ಷಣ ಹೇಗಿದೆ? ಎಲ್ಲೆಲ್ಲಿ ಕಲ್ಲುಮಿಶ್ರಿತ ಮಣ್ಣು ಇದೆ ಎಂಬ ಅನುಭವವಿದೆ. ಅಷ್ಟೇ ಅಲ್ಲ, ದೆಹಲಿ ಮೆಟ್ರೋ, ಕೊಂಕಣ ರೈಲ್ವೆ ನಿರ್ಮಾಣ ಯೋಜನೆ ತಾವು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ದೇಶದ ಅತಿ ಉದ್ದದ ಜಮ್ಮು-ಕಾಶ್ಮೀರ ಸೇತುವೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಕಂಪನಿ ಸಕ್ರಿಯವಾಗಿದೆ. ಇದೇ ಅನುಭವ ಸುರಂಗದಲ್ಲಿ ರಸ್ತೆ ನಿರ್ಮಿಸುವಲ್ಲಿ ಪೂರಕವಾಗಲಿದೆ’ ಎಂದು ಅಫ್ಕಾನ್ಸ್‌ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಅಫಾRನ್ಸ್‌ ಕಂಪನಿಯು ಪ್ರಸ್ತುತ ನಮ್ಮ ಮೆಟ್ರೋ 2ನೇ ಹಂತದಲ್ಲಿ ಡೇರಿ ವೃತ್ತದಿಂದ ವೆಲ್ಲಾರ ಜಂಕ್ಷನ್‌ ನಡುವೆ ಸುರಂಗ ಮಾರ್ಗ ನಿರ್ಮಿಸುವ 1,526 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್‌ ಪಡೆದಿದೆ. 5.5 ಕಿ.ಮೀ. ಉದ್ದದ ಸುರಂಗಕ್ಕೆ ವರದಾ, ರುದ್ರ ಮತ್ತು ವಾಮಿಕ ಎಂಬ ಟನೆಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ)ಗಳನ್ನು ಹೊಂದಿದ್ದು, ಈಗಾಗಲೇ ಆ ಪೈಕಿ ವರದ ತನ್ನ ಕಾರ್ಯ ಪೂರೈಸಿ ಹೊರಬಂದಿದೆ.

ಬಿಎಂಆರ್‌ಸಿಎಲ್‌ ಸಲಹೆ: ಇನ್ನು ಎಇ ಕಾಮ್‌ ಕಂಪನಿ ಮೆಟ್ರೋ ಸುರಂಗ ಮಾರ್ಗದಲ್ಲಿ ವಯರಿಂಗ್‌, ಒಳಚರಂಡಿ ವ್ಯವಸ್ಥೆ ಸೇರಿ ಮತ್ತಿತರ ಪೈಪ್‌ಲೈನ್‌ಗಳ ಅಳವಡಿಕೆ, ಎಲೆಕ್ಟ್ರೋ ಮೆಕಾನಿಕಲ್‌ಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ಕ್ಕೆ ಸಲಹೆ ನೀಡುತ್ತಿದೆ. ಈ ಅನುಭವವು ಟನೆಲ್‌ ರಸ್ತೆ ನಿರ್ಮಾಣಕ್ಕೂ ನೆರವಾಗಲಿದೆ. ಆದ್ದರಿಂದ ತಮ್ಮನ್ನು ಪರಿಗಣಿಸುವಂತೆ ಗಮನ ಸೆಳೆದಿದೆ.

Advertisement

ಆದರೆ, ಮೆಟ್ರೋ ಸುರಂಗದ ಗಾತ್ರ ಕನಿಷ್ಠ 6 ಮೀಟರ್‌ ಇದೆ. ಇದಕ್ಕೆ ತಕ್ಕಂತೆ ದೈತ್ಯ ಯಂತ್ರಗಳಾದ ಟಿಬಿಎಂಗಳ ವಿನ್ಯಾಸವಿದೆ. ಟನೆಲ್‌ ರಸ್ತೆ ದ್ವಿಮುಖ ಆಗಿರಲಿದ್ದು, ಅದರ ಸುತ್ತಳತೆ ದುಪ್ಪಟ್ಟು ಅಂದರೆ 13ರಿಂದ 14 ಮೀಟರ್‌ ಬರಲಿದೆ. ಅಲ್ಲದೆ, ಸುರಂಗದ ಉದ್ದ ಹತ್ತಾರು ಕಿ.ಮೀ. ಆಗಿರಲಿದೆ. ಈ ನಿಟ್ಟಿನಲ್ಲಿ ಈಗಿರುವ ಯಂತ್ರಗಳಂತೂ ಉಪಯೋಗ ಆಗುವುದಿಲ್ಲ. ಆದರೆ, ಗುತ್ತಿಗೆ ಪಡೆದಾಗ ಬೇರೆ ಯಂತ್ರಗಳನ್ನೂ ತರಲು ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಬಿಎಂಆರ್‌ಸಿಎಲ್‌ ಅನುಭವ ಬಳಸಿಕೊಳ್ಳಬಹುದು:

ಕಂಪನಿಗಳು ಮಾತ್ರವಲ್ಲ; ಹತ್ತಾರು ಕಿ.ಮೀ. ಸುರಂಗ ಮಾರ್ಗದ ಜತೆಗೆ ನೂರಾರು ಕಿ.ಮೀ. ಮೆಟ್ರೋ ಮಾರ್ಗ ನಿರ್ಮಿಸುತ್ತಿರುವ ಬಿಎಂಆರ್‌ಸಿಎಲ್‌ ಅನುಭವವನ್ನೂ ಟನೆಲ್‌ ರಸ್ತೆಗೆ ಬಳಸಿಕೊಳ್ಳಲು ಅವಕಾಶ ಇದೆ. ಉದ್ದೇಶಿತ ಯೋಜನೆಯ ಜಾರಿ ಸಂದರ್ಭದಲ್ಲಿ ಅನುಷ್ಠಾನ ಸಮಿತಿಯಲ್ಲಿ ಬಿಎಂಆರ್‌ಸಿಎಲ್‌ ತಜ್ಞರನ್ನು ಸೇರಿಸಿಕೊಳ್ಳಬಹುದು. ಆ ಮೂಲಕ ಅವರಿಂದಲೂ ಉತ್ತಮ ಸಲಹೆಗಳನ್ನು ಪಡೆಯಬಹುದಾಗಿದೆ ಎಂದೂ ತಜ್ಞರು ಹೇಳುತ್ತಾರೆ.

ಡಿಸಿಎಂ ಸಂಪರ್ಕಿಸಿರುವ ಕಂಪನಿಗಳು :

ಟನೆಲ್‌ ರಸ್ತೆ ನಿರ್ಮಾಣಕ್ಕೆ ನಮ್ಮ ಮೆಟ್ರೋ ಯೋಜನೆಯಲ್ಲಿ ಸುರಂಗ ಮಾರ್ಗ ನಿರ್ಮಾಣದಲ್ಲಿ ಸಕ್ರಿಯವಾಗಿರುವ ಒಂದೆರಡು ಕಂಪನಿಗಳೂ ಆಸಕ್ತಿ ತೋರಿಸಿವೆ. ಈಗಾಗಲೇ ನನ್ನನ್ನು ಸಂಪರ್ಕಿಸಿ, ಪ್ರಾತ್ಯಕ್ಷಿಕೆಗಳನ್ನು ನೀಡಿವೆ. ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಈಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next