Advertisement

ಸಮುದಾಯದ ಸಂಘಟನೆ ಅವಶ್ಯ

08:54 PM Oct 09, 2019 | Lakshmi GovindaRaju |

ಗೌರಿಬಿದನೂರು: ಸಮುದಾಯದ ಸಂಘಟನೆಯು ಇಂದಿನ ಸಮಾಜದ ಮೂಲಭೂತ ಅವಶ್ಯಕತೆಯಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷ ಎಸ್‌.ಎನ್‌.ಶಬರೀಶ್‌ ಅಭಿಪ್ರಾಯಪಟ್ಟರು. ಪಟ್ಟಣದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ವಿಭಾಗೀಯ ಪ್ರವಾಸದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಯುವಕರಿಗಾಗಿ ಮಹಾಸಭಾ: ಆರ್ಯವೈಶ್ಯ ಯುವಜನ ಮಹಾಸಭಾವು ಯುವಕರಿಂದ ಯುವಕರಿಗಾಗಿಯೇ ರೂಪು ಪಡೆದಿರುವ ಸಂಸ್ಥೆಯಾಗಿದೆ. ನಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬ ಯುವಕನಿಗೂ ಅವನ ಸಾಮರ್ಥ್ಯಕ್ಕೆ ಅನುಗುಣವಾದ ಜವಾಬ್ದಾರಿ ನೀಡಲಾಗುತ್ತದೆ. ಅವರು ತಮಗರಿವಿಲ್ಲದಂತೆ ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದ ಅವರ ವ್ಯಕ್ತಿತ್ವ ವಿಕಾಸದ ಜೊತೆ ಜೊತೆಗೆ ಸಾಮಾಜಿಕ ಕಾರ್ಯವೂ ನಿರ್ವಹಿಸಲ್ಪಡುತ್ತದೆ ಎಂದರು.

ನೇರ ಸಂಪರ್ಕ: ರಾಜ್ಯಾದ್ಯಂತ 350ಕ್ಕೂ ಹೆಚ್ಚು ವಾಸವಿ ಯುವಜನ ಸಂಘಗಳು ಅಸ್ತಿತ್ವದಲ್ಲಿದ್ದು, ಇವುಗಳ ಮುಖಾಂತರ ಹಲವು ಬಗೆಯ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲಾ ಸಂಸ್ಥೆಗಳನ್ನು ನೇರ ಸಂಪರ್ಕದ ಮೂಲಕ ತಲುಪುವುದೇ ನಮ್ಮ ಗುರಿಯಾಗಿದೆ ಎಂದರು. ನಮ್ಮೆಲ್ಲರ ಪ್ರಯತ್ನದ ಫ‌ಲವಾಗಿ ಆರ್ಯವೈಶ್ಯ ಅಭಿವೃದ್ಧಿ ನಿಗಮವು ಇಂದು ಅಸ್ತಿತ್ವ ಪಡೆದುಕೊಂಡಿದೆ. ಈ ಎಲ್ಲಾ ಸಂಗತಿಗಳನ್ನೂ ಗಮನಿಸುವುದರ ಮೂಲಕ ನಾವೆಲ್ಲರೂ ಸಂಘಟನೆಗಾಗಿ ಕಟ್ಟಿಬದ್ಧರಾಗಬೇಕಾಗಿದೆ ಎಂದು ಹೇಳಿದರು.

ನಾಯಕರನ್ನು ಬೆಳೆಸುವುದು ಅಗತ್ಯ: ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಆರ್‌.ರಾಜಣ್ಣ ಮಾತನಾಡಿ, ಸಂಸ್ಥೆಗಳನ್ನು ಕಟ್ಟುವುದು ಅದರ ಮುಖೇನ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವುದು ಒಂದು ಭಾಗವಾದರೆ, ಮುಂದಿನ ಭವಿಷ್ಯದ ಸಂದರ್ಭದಲ್ಲಿ ಆ ಸಂಸ್ಥೆಯ ಗತಿಯೇನು? ಎಂದು ಯೋಚಿಸುವುದು ಅಗತ್ಯವಾಗಿದೆ ಎಂದರು.

ಹೀಗಾಗಿ ನಮ್ಮ ನಂತರದ ನಾಯಕರನ್ನು ತಯಾರು ಮಾಡುವುದೂ ನಮ್ಮದೇ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಮುಖಗಳನ್ನು ಸಂಘಟನೆಗೆ ಪರಿಚಯಿಸಿ ಅವರಲ್ಲಿ ಸಂಘಟನಾ ಮನೋಭಾವವನ್ನು ಬೆಳೆಸಬೇಕಾಗಿದೆ ಎಂದರು. ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಕಾರ್ಯದರ್ಶಿ ಬಿ.ಆರ್‌.ವಿಕ್ರಂ, ಬದ್ರಿಪ್ರಸಾದ್‌, ಸಿಎಂಎಸ್‌ ರಾಜೇಂದ್ರ ಪ್ರಸಾದ್‌, ಭಾನವಿ ಅರಂವಿದ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next