Advertisement

ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ

09:27 AM Feb 16, 2019 | Team Udayavani |

ಮಾನ್ವಿ: ಬಂಜಾರ ಸಮುದಾಯ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವಿಧಾನಸಭಾ ಸದಸ್ಯ ರಾಜಾವೆಂಕಟಪ್ಪ ನಾಯಕ ಹೇಳಿದರು. ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಂಜಾರ ಸಮುದಾಯದ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು ಬೆಳಕಿಗೆ ಬರುತ್ತಿಲ್ಲ. ಬಂಜಾರ ಸಮುದಾಯ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕಿದೆ ಎಂದು ಹೇಳಿದರು.
 
ಸಿಂಧೂ ನಾಗರಿಕತೆಯಷ್ಟೆ ಬಂಜಾರ ಸಮುದಾಯ ಇತಿಹಾಸ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಲಮಾಣಿ ಭಾಷೆಗೆ ಲಿಪಿ ಇಲ್ಲದೆ ಇರುವುದು ಕೂಡ ಅಭಿವೃದ್ಧಿಗೆ ಅಡ್ಡಿಯಾಗಿರಬಹುದು. ತಮ್ಮ ತಾತ ರಾಜ ಹನುಮಪ್ಪ ನಾಯಕ ಹಾಗೂ ತಂದೆ ಅಂಬಣ್ಣ ನಾಯಕ ಕಾಲದಿಂದಲೂ ಲಮಾಣಿ ಸಮುದಾಯದೊಂದಿಗೆ ಅವಿನಾಭಾವ ಸಂಬಂಧ ಇದೆ. ತಮ್ಮ ಅಧಿಕಾರಾವಧಿಯಲ್ಲಿ ಬಂಜಾರ ಸಮುದಾಯಕ್ಕೆ ಉನ್ನತ ರಾಜಕೀಯ ಸ್ಥಾನಮಾನ ನೀಡಲಾಗುವುದು. ಪುರಸಭೆಯಿಂದ ಜಾಗ ಮಂಜೂರಾದರೆ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಹೇಳಿದರು.

ಮದ್ಲಾಪುರ ಸರ್ಕಾರಿ ಶಾಲೆ ಶಿಕ್ಷಕ ತಮ್ಮಣ್ಣ ರಾಥೋಡ ಸಂತ ಶ್ರೀ ಸೇವಾಲಾಲ ಜಯಂತಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಬಸವ
ವೃತ್ತದ ಮೂಲಕ ಟಿಎಪಿಸಿಎಂಎಸ್‌ ಆವರಣದವರೆಗೆ ಸಂತ ಶ್ರೀ ಸೇವಾಲಾಲ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಜಿಪಂ ಸದಸ್ಯ ಕಿರಿಲಿಂಗಪ್ಪ, ಉಪತಹಶೀಲ್ದಾರ್‌ ಸಿದ್ದನಗೌಡ, ಪುರಸಭೆ ಹಿರಿಯ ಸದಸ್ಯ ರಾಜಾಮಹೇಂದ್ರ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ತನ್ವಿರ್‌ ವಕೀಲ, ಗೋವಿಂದರಾಜ ವಕೀಲ, ವೀರೇಶ ಅರೋಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next