Advertisement

ಮಕ್ಕಳ ಮಾರಾಟ ತಡೆಗೆ ಸಮುದಾಯ ಸಹಕಾರ ಅಗತ್ಯ

05:45 PM Oct 07, 2017 | |

ಕಲಬುರಗಿ: ಈಚೆಗೆ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಮುದಾಯದ ಸಹಕಾರ ತುಂಬಾ ಅಗತ್ಯ ಎಂದು ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ ನಿರ್ದೇಶಕ ವಿಠ್ಠಲ ಚಿಕಣಿ ಹೇಳಿದರು.

Advertisement

ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಸಂಸ್ಕಾರ
ಪ್ರತಿಷ್ಠಾನ, ರೆಡ್‌ ಅಲರ್ಟ್‌ ಅಂಡ್‌ ಮೈ ಚಾಯ್ಸಿ ಫೌಂಡೇಶನ್‌ ಮತ್ತು ಚನ್ನಮಲ್ಲೇಶ್ವರ ಪ್ರೌಢಶಾಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಗ್ರಾಮ ಸುರಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮಸ್ಥರು ತಮ್ಮ ಸುತ್ತಲಿನಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅವರ ವಿರುದ್ಧ ನಡೆಯುವ ಚಟುವಟಿಕೆಗಳ ಕುರಿತು ಎಚ್ಚರಿಕೆ ವಹಿಸಬೇಕು. ಮಕ್ಕಳು ಕೂಡ ತಮ್ಮ ವಿರುದ್ಧ ನಡೆಯುವ ಎಲ್ಲ ಬೆಳವಣಿಗೆ ಕುರಿತು ಪಾಲಕರಿಗೆ ತಿಳಿಸಬೇಕು ಎಂದು ಹೇಳಿದರು.

ಬಾಲ್ಯ ವಿವಾಹ ಕಾನೂನು ಬಾಹೀರವಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಯಾರೇ ಮಕ್ಕಳು ಗಮನಿಸಿದರೆ ಸುಮ್ಮನೆ ಮೌನವಾಗಿ ಕೂಡಬಾರದು. ನಿಮ್ಮ ವಿರುದ್ಧ ನಡೆಯುವ ಯಾವುದೇ ಚಟುವಟಿಕೆ ಶಿಕ್ಷಾರ್ಹವಾಗಿದೆ. ಅತ್ಯಾಚಾರ ಪ್ರಕರಣದಿಂದ ಎಚ್ಚರಿಕೆ ವಹಿಸಬೇಕು. ಪರಿಚಯ ಇಲ್ಲದ ವ್ಯಕ್ತಿಗಳೊಂದಿಗೆ
ಸಲುಗೆಯಿಂದ ಮಾತನಾಡುವುದು ಮತ್ತು ಸಂಪರ್ಕ ಸಾಧಿಸಿಕೊಳ್ಳುವುದು ತಪ್ಪು. ಇಂತಹ ಘಟನೆಗಳಿಂದ ಬಾಲಕಿಯರು ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಡದಾಳ ಗ್ರಾಪಂ ಸದಸ್ಯ ಶಿವಾನಂದ ಗೊಬ್ಬೂರು, ಬಾಲಕಿಯರು ಹಾಗೂ ಚಿಕ್ಕ ಮಕ್ಕಳ ಮೇಲೆ ಈಗ ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಹೇಳಿದರು ಅತಿಥಿಯಾಗಿ ಆಗಮಿಸಿದ್ದ ಶಂಕರ ಪಾಟೀಲ ಹಾಗೂ ಭೀಮರಾವ ಭಾರತಿ ಮಾತನಾಡಿ, ಸರಕಾರ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹಲವಾರು ಸಹಾಯವಾಣಿ ಆರಂಭಿಸಿದೆ. ನಮ್ಮ ಗ್ರಾಮೀಣ ಮಕ್ಕಳು ಇದರ ಪ್ರಯೋಜನ ಪಡೆಯಬೇಕಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಚನ್ನಮಲ್ಲೇಶ್ವರ ಪ್ರೌಢಶಾಲೆ ಶಿಕ್ಷಕ ಸಾಗರ ನೂಲಾ ಮಾತನಾಡಿದರು. ಚನ್ನಮಲ್ಲಪ್ಪ ಮಳಗಿ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next