Advertisement

ತೈಲ ಬೆಲೆ ಇಳಿಕೆಗೆ ಭಾರತ ಕಮ್ಯುನಿಸ್ಟ್‌ ಪಕ್ಷ ಒತ್ತಾಯ

09:03 AM Jul 01, 2020 | Suhan S |

ರಾಯಚೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ತಡೆಗೆ ಮತ್ತು ಕೋವಿಡ್ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್ವಾದ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಲಾಕ್‌ ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇಂದಿಗೂ ಪುನಶ್ಚೇತನ ಕಂಡಿಲ್ಲ. ಜನರಿಗೆ ಆದಾಯವೇ ಬರುತ್ತಿಲ್ಲ. ಇಂಥ ಸಮಯದಲ್ಲಿ ಸರ್ಕಾರ ತೈಲ ಬೆಲೆ ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಟೀಕಿಸಿದರು.

ಸರ್ಕಾರದ ಪರಿಹಾರ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಈವರೆಗೂ ಜನರಿಗೆ ಪರಿಹಾರ ಸಿಕ್ಕಿಲ್ಲ. ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗಲಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರೇ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು. ತೈಲ ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳಿಸಿ ಕೂಡಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ತಕ್ಷಣವೇ ಮುಂದಿನ ಆರು ತಿಂಗಳವರೆಗೆ ಪ್ರತಿ ತಿಂಗಳು 7500 ರೂ. ಸಹಾಯಧನ ನೀಡಬೇಕು. ಅಗತ್ಯವಿರುವ ಎಲ್ಲರಿಗೂ 10 ಕೆಜಿ ಆಹಾರ ಧಾನ್ಯಗಳ ಜೊತೆಗೆ 14 ಅಗತ್ಯ ವಸ್ತುಗಳ ಕಿಟ್‌ಗಳನ್ನು ಹಂಚಿಕೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಕಾರ್ಯದರ್ಶಿ ಕೆ.ಜಿ.ವೀರೇಶ, ಸದಸ್ಯರಾದ ಕರಿಯಪ್ಪ ಹಚ್ಚೊಳ್ಳಿ, ಎಚ್‌.ಪದ್ಮಾ, ಡಿ.ಎಸ್‌.ಶರಣಬಸವ, ವರಲಕ್ಷ್ಮೀ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next