ಚಾರ್ಲ್ಸ್ ಟನ್(ದಕ್ಷಿಣ ಕೆರೊಲಿನಾ):ಈ ಹಿಂದಿನ ಸೋವಿಯತ್ ಒಕ್ಕೂಟದಂತೆ ಕಮ್ಯೂನಿಸ್ಟ್ ಚೀನಾ ಕೂಡಾ ಇತಿಹಾಸದ ಬೂದಿ ರಾಶಿಯಲ್ಲಿ ಅಂತ್ಯಗೊಳ್ಳಲಿದೆ ಎಂದು ಭಾರತೀಯ ಮೂಲದ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಒಂದು ಕಾಲದಲ್ಲಿ ಸ್ವರ್ಗದಂತಿದ್ದ ಗೋವಾ ಈಗ ಕ್ರಿಮಿನಲ್ ಲೋಕವಾಗುತ್ತಿದೆ: ಕಾಂಗ್ರೆಸ್ ಟೀಕೆ
ನಿಕ್ಕಿ ಹ್ಯಾಲೆ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿಯಾಗಿದ್ದು, ಔಪಚಾರಿಕವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚೀನಾ ವಿರುದ್ಧ ಈ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
51 ವರ್ಷದ ಹ್ಯಾಲೆ ದಕ್ಷಿಣ ಕೆರೊಲಿನಾಗೆ ಎರಡು ಬಾರಿ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿಯಾಗಿರುವ ಹ್ಯಾಲೆ ಅವರು ಇತ್ತೀಚೆಗೆ ಅಮೆರಿಕ ಚೀನಾದ ಗುಪ್ತಚರ ಬಲೂನ್ ಹೊಡೆದುರುಳಿಸಿದ ವಿಚಾರದಲ್ಲಿ ಉಭಯ ದೇಶಗಳ ನಡುವೆ ವಾಕ್ಸಮರ ನಡೆಯುತ್ತಿರುವ ನಡುವೆಯೇ ಈ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಕರಾವಳಿ ನಗರಿ ದಕ್ಷಿಣ ಕೆರೊಲಿನಾದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ನಿಕ್ಕಿ ಹ್ಯಾಲೆ, ಅಮೆರಿಕದ ಶಸ್ತ್ರಾಸ್ತ್ರ ಪಡೆ ಎಂದಿಗೂ ಹೆಚ್ಚು ಬಲಶಾಲಿ ಮತ್ತು ಸಮರ್ಥವಾಗಿರುತ್ತದೆ. ಬಲಾಢ್ಯ ಸೇನೆ ಯುದ್ಧವನ್ನು ಪ್ರಾರಂಭಿಸುವುದಿಲ್ಲ, ಬದಲಾಗಿ ಸೇನೆಯು ಯುದ್ಧಗಳನ್ನು ತಡೆಯುತ್ತದೆ. ನಮ್ಮ ಮೈತ್ರಿ ದೇಶದ ಜೊತೆ ನಾವು ಎಂದಿಗೂ ಕೈಜೋಡಿಸುತ್ತೇವೆ. ಅದೇ ರೀತಿ ನಮ್ಮ ಶತ್ರು ದೇಶಗಳ ವಿರುದ್ಧವೂ ಎದ್ದು ನಿಲ್ಲುತ್ತೇವೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.