ತಿ.ನರಸೀಪುರ: ಸಕಾರತ್ಮಕ ಚಿಂತನೆಗಳು ಹಾಗೂ ಸಂಪರ್ಕ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಂಡಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವು ಕಾಣಲು ಸಾಧ್ಯ ಎಂದು ಪತ್ರಕರ್ತ ಎಂ. ಮಹದೇವ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿ ಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವು ವ್ಯಕ್ತಿಗಳಾಗಿ ರೂಪುಗೊಂಡು ಸಾಧನೆಯ ಹಾದಿ ಹಿಡಿಯಲು ನಮಗೆ ಕೌಶಲ್ಯಗಳು ಬಹಳ ಅಗತ್ಯ ಎಂದರು.
ಸಾಧನೆಗೆ ಮುಖ್ಯವಾಗಿ ಸಕಾರತ್ಮಕ ಆಲೋಚನೆಗಳು, ಸಂವಹನ, ಪ್ರೇರೇಪಣೆ, ನಾಯಕತ್ವ, ಸಂದರ್ಶನ ಕೌಶಲ್ಯಗಳು ಹಾಗೂ ಮಾಹಿತಿಯನ್ನು ವಿಶಾಲವಾಗಿ ಸ್ವೀಕರಿಸುವ ಮನೋಭಾವವಿರಬೇಕು. ಉತ್ತಮ ಸಂವಹನ ನಿಮಗೆ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪೊ›. ಕೆ. ನಾಗರತ್ನಮ್ಮ ಮಾತನಾಡಿ, ಪದವಿ ಮುಗಿಸಿ ಹೊರ ಹೋಗುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗದೇ ಜಾಗತಿಕ ಪ್ರಪಂಚವನ್ನು ಎದುರಿಸಲು ಅಗತ್ಯವಾದ ಮಾಹಿತಿ, ತರಬೇತಿ ನೀಡಿ ಕಳುಹಿಸುವ ಉದ್ದೇಶದಿಂದ ನಮ್ಮ ಕಾಲೇಜಿನ ಪ್ರಾಧ್ಯಾಪಕ ಪರಶಿವಮೂರ್ತಿ ಕಳೆದ ಒಂದು ವಾರದಲ್ಲಿ ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ದೊರಕಿಸಿದ್ದಾರೆ. ಅವರ ಉತ್ಸಾಹ ಹಾಗೂ ಪೋ›ತ್ಸಾಹದಿಂದ ವಿದ್ಯಾರ್ಥಿಗಳು ಇಂದು ಕೀಳರಿಮೆ, ಭಯ ತೊರೆದು ಸ್ಪಷ್ಟವಾಗಿ ಮಾತನಾಡುವ ಕಲೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.
ತರಬೇತಿ ಪಡೆದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ತಮಗೆ ಸಿಕ್ಕ ತರಬೇತಿಯಿಂದಾದ ಬದಲಾವಣೆ, ವ್ಯಕಿತ್ವ ಬೆಳವಣಿಗೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನಲ್ಲಿ ತರಬೇತಿ ನೀಡಿದ ಪ್ರಾಧ್ಯಾಪಕರಾದ ಪರಶಿವಮೂರ್ತಿ, ಪೊ›. ಪ್ರೇಮಕುಮಾರಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.