ಚಿಕ್ಕೋಡಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ ಮನೆಗೆ ಮುಟ್ಟಿಸುವ ಉದ್ದೇಶದಿಂದ ಬಿಜೆಪಿ ಸರಕಾರ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಚಿಂಚಣಿ, ಕೋಥಳಿ, ಕುಪ್ಪಾಣವಾಡಿ, ಹಂಡ್ಯಾನವಾಡಿ, ನಾಯಿಂಗ್ಲಜ, ನವಹಲಿಹಾಳ ಮತ್ತು ಧುಳಗನವಾಡಿ ಮುಂತಾದ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನರಿಗೆ ತಿಳಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಕೇಂದ್ರ ಸರಕಾರ ರೈತರ ಖಾತೆಗಳಿಗೆ 6000 ರೂ. ಮತ್ತು ರಾಜ್ಯ ಸರಕಾರ 4000 ರೂ. ಸೇರಿ ವರ್ಷಕ್ಕೆ 10000 ರೂ. ನೀಡುತ್ತಿವೆ. ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ಎಲ್ಲ ಜನರಿಗೂ ಲಸಿಕೆ ನೀಡಿ ಕೋಟಿ ಕೋಟಿ ಜನರ ಜೀವ ರಕ್ಷಣೆ ಮಾಡುವ ಮಹತ್ತರ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ ಎಂದು ಹೇಳಿದರು.
ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಯಾರೂ ಇಲ್ಲ ಎಂದು ಕಾಂಗ್ರೆಸ್‌ನವರು ತಿಳಿದುಕೊಳ್ಳಬಾರದು. ಬಿಜೆಪಿಯಲ್ಲಿ ನಾನು, ಜೊಲ್ಲೆ ಮತ್ತು ಅಮೀತ ಕೋರೆ ಇದ್ದೇವೆ. ನಾವು ಸೇರಿದಂತೆ ಬಹಳಷ್ಟು ಜನ ಆಕಾಂಕ್ಷಿಗಳು ಭಾರತೀಯ ಜನತಾ ಪಾರ್ಟಿಯಲ್ಲಿದ್ದು, ಕಾಂಗ್ರೆಸ್ ನವರು ಬಿಜೆಪಿಯಲ್ಲಿ ಯಾರೂ ಅಭ್ಯರ್ಥಿಗಳಿಲ್ಲ ಎಂದು ತಿಳಿದುಕೊಳ್ಳದೇ ಎಚ್ಚರವಾಗಿರಬೇಕು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅಪ್ಪಾಸಾಬ ಚೌಗಲಾ, ಸಂಜಯ ಪಾಟೀಲ, ಪ್ರವೀಣ ಮಹಾಜನ, ಕಿರಣ ಪಾಟೀಲ, ಅಭಯ ಪಾಟೀಲ, ಶಾಂತಿನಾಥ ಸಕಾವರ, ಸೌರಭ ಪಾಟೀಲ, ಶ್ರೇಣಿಕ ಚೌಗಲಾ. ಪೋಪಟ ಖೋತ, ಸುನೀಲ ಕಮತೆ, ಹಾಳಪ್ಪ ಜಿಗನ, ಪವನ ಹೂವನ್ನವರ, ಕಾಕಾ ಖಡ್ಡ ಮುಂತಾದವರು ಉಪಸ್ಥಿತರಿದ್ದರು.