Advertisement
ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾ|ನ ರೈತರ ಅಡಿಕೆ ಕೃಷಿಯನ್ನು ಬಹಳಷ್ಟು ಕಾಡಿದ ಬೇರು ಹುಳು ರೋಗ ಇದೀಗ ಪುತ್ತೂರು ತಾಲೂಕಿನ ರೈತರ ತೆಂಗಿನ ಮರಕ್ಕೆ ಬಾಧಿಸಿದೆಯೇ ಎಂಬ ಸಂಶಯ ರೈತರನ್ನು ಕಾಡತೊಡಗಿದೆ. ರೋಗ ಬಾಧಿಸಿದ ಆರು ತಿಂಗಳಲ್ಲಿ ತೆಂಗಿನ ಮರ ಸಾಯುತ್ತಿದ್ದು, ಇಲ್ಲಿಯವರೆಗೆ ಯಾವ ಔಷಧಿಯೂ ಫಲ ನೀಡಿಲ್ಲ. ಆರಂಭದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣುವುದಿಲ್ಲ. ರೋಗಕ್ಕೆ ತುತ್ತಾದ ಮರದ ಕೊನೆಯ ಸಿರಿಯೊಂದನ್ನು ಬಿಟ್ಟು ಉಳಿದ ಗರಿಗಳು ಏಕಾಏಕಿ ಬಾಗುತ್ತವೆ. ಫಸಲು ಬರುವ ಮರವಾದರೆ ತೆಂಗಿನ ಗೊನೆಯೊಂದಿಗೆ ಬಾಗುತ್ತದೆ. ಬಳಿಕ ಎಳತ್ತು ಸೀಯಾಳ ಸಮೇತ ಇದ್ದ ತೆಂಗಿನಕಾಯಿ ಉದುರಲು ಆರಂಭವಾಗುತ್ತದೆ. ಹೀಗೆ ಉದುರಲು ಪ್ರಾರಂಭವಾದ ತೆಂಗಿನಕಾಯಿಗಳು ಎರಡರಿಂದ ಮೂರು ತಿಂಗಳ ವರೆಗೆ ಉದುರುತ್ತವೆ. ಆರು ತಿಂಗಳಲ್ಲಿ ತೆಂಗಿನ ಮರ ಸಾಯುತ್ತದೆ. ಯಾವುದೇ ಕೀಟನಾಶಕ, ಔಷಧಿ ಸಿಂಪಡಿಸಿದರೂ ಹತೋಟಿಗೆ ಬಾರದೆ ಸಾವನ್ನಪ್ಪುತ್ತಿವೆ.
ಸುಳ್ಯ ತಾಲೂಕಿನಾದ್ಯಂತ ಅಡಿಕೆ ಮರಗಳಿಗೆ ಬೇರು ರೋಗ ಬಾಧಿಸಿ ರೈತಾಪಿ ಜನತೆಯನ್ನು ಹೈರಾಣಾಗಿಸಿತ್ತು. ಬಳಿಕದ ದಿನಗಳಲ್ಲಿ ಆಧುನಿಕ ರಾಸಾಯನಿಕ ಕ್ರಿಮಿನಾಶಕ ಔಷಧಿ ಬಳಸಿ ಈ ರೋಗವನ್ನು ಹತೋಟಿಗೆ ತರಲಾಗಿತ್ತು. ಆದರೆ, ಇದೀಗ ಪುತ್ತೂರು ತಾಲೂಕಿನ ರೈತರ ತೆಂಗಿನ ಮರಕ್ಕೆ ಈ ರೋಗ ಅಂಟಿಕೊಂಡು ಹಲವಾರು ತೆಂಗಿನ ಮರಗಳನ್ನು ಬಲಿ ಪಡೆದುಕೊಂಡಿದೆ. ಈ ಮೂಲಕ ರೈತರ ಆದಾಯಕ್ಕೆ ಹೊಡೆತ ಬಿದ್ದಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಮಾಹಿತಿ ಸಂಗ್ರಹಿಸುತ್ತೇವೆ
ಬೇರು ಹುಳುಗಳ ರೋಗ ತೆಂಗಿನ ಬೆಳೆಗೆ ಅಷ್ಟಾಗಿ ಬರುವುದಿಲ್ಲ. ಹತ್ತಿ ಹುಳದಿಂದ ತೆಂಗು ಫಂಗಸ್ ರೋಗಗಳಿಗೆ ಹೆಚ್ಚು ಬಲಿಯಾಗುತ್ತದೆ. ಇದು ವೈರಲ್ ಆಗಿ ಮತ್ತೂಂದು ಮರಕ್ಕೂ ಹರಡುತ್ತದೆ. ಸಾಯುತ್ತಿರುವ ತೆಂಗಿನ ಮರಗಳ ಬಗ್ಗೆ ಸಮಗ್ರ ಮಾಹಿತಿಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಂಪೂರ್ಣ ಮಾಹಿತಿ ಪಡೆಯಲಾಗುವುದು.
– ಎಚ್.ಆರ್. ನಾಯಕ್, ತೋಟಗಾರಿಕಾ ಜಿಲ್ಲಾ ನಿರ್ದೇಶಕ
Related Articles
Advertisement