Advertisement

ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಷ: ಇಚ್ಛಾಶಕ್ತಿಯಿಲ್ಲದ ಸರಕಾರ

07:58 AM Jan 05, 2018 | Team Udayavani |

ಕರಾವಳಿ ಮತ್ತೂಂದು ಹತ್ಯೆಗೆ ಸಾಕ್ಷಿಯಾಗಿದೆ. ಸುರತ್ಕಲ್‌ ಸಮೀಪದ ಕಾಟಿಪಳ್ಳದಲ್ಲಿ ಬುಧವಾರ ಹಾಡಹಗಲೇ ದೀಪಕ್‌ ರಾವ್‌ ಎಂಬ ಯುವಕನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಇದಕ್ಕೆ ಪ್ರತೀಕಾರ ಎಂಬಂತೆ ರಾತ್ರಿ ಇನ್ನಿಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಈ ಘಟನೆಗಳ ಬಳಿಕ ಸುರತ್ಕಲ್‌ ಮತ್ತು ಸುತ್ತಮುತ್ತಲ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ನಿರ್ಬಂಧಕಾಜ್ಞೆ ಹೇರಿ ಸದ್ಯಕ್ಕೆ ಪರಿಸ್ಥಿತಿಯನ್ನು ಹದ್ದುಬಸ್ತಿನಲ್ಲಿಟ್ಟಿದ್ದರೂ ಪರಿಸ್ಥಿತಿ ಇನ್ನೂ ಪೂರ್ತಿಯಾಗಿ ಶಾಂತವಾಗಿಲ್ಲ. ಹೊನ್ನಾವರದಲ್ಲಿ ಕಳೆದ ತಿಂಗಳು ಹೊತ್ತಿಕೊಂಡ ಕೋಮು ಜ್ವಾಲೆಯ ಬಿಸಿ ಆರುವ ಮುನ್ನವೇ ಕರಾವಳಿ ಮತ್ತೂಮ್ಮೆ ಉದ್ವಿಗ್ನಗೊಳ್ಳಲು ಈ ಘಟನೆ ಕಾರಣವಾಗಿದೆ. ಕಳೆದೆರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ನಾಲ್ಕನೇ ಕೊಲೆಯಿದು. ಎರಡು ವರ್ಷದ ಹಿಂದೆ ಮೂಡಬಿದಿರೆಯಲ್ಲಿ ಪ್ರಶಾಂತ್‌ ಪೂಜಾರಿ ಎಂಬ ಯುವಕನನ್ನು ಮುಂಜಾನೆ ವೇಳೆ ಕೊಲೆಗೈಯ್ಯಲಾಗಿತ್ತು. ಕಳೆದ ವರ್ಷ ಬಿ.ಸಿ. ರೋಡ್‌ನ‌ಲ್ಲಿ ಶರತ್‌ ಮಡಿವಾಳ ಹತ್ಯೆಯಾದರು. ಬಳಿಕ ಉಳ್ಳಾಲದಲ್ಲಿ ರಾಜು ಮೊಗವೀರ ಎಂಬವರ ಹತ್ಯೆಯಾಯಿತು. ಇದೇ ವೇಳೆ ಕೆಲ ಮುಸ್ಲಿಂ ಯುವಕರೂ ಹಿಂಸಾಚಾರದ ಬಲಿಪಶುಗಳಾಗಿದ್ದಾರೆ. ಹೀಗೆ ಕಳೆದ ಸುಮಾರು ಮೂರು ವರ್ಷಗಳಿಂದ ಕರಾವಳಿಯಲ್ಲಿ ಪದೇ ಪದೇ ಮತೀಯ ಹಿಂಸಾಚಾರ ಸಂಭವಿಸುತ್ತಿದೆ. ಕೋಮು ಸೂಕ್ಷ್ಮ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಜಿಲ್ಲೆಯಲ್ಲಿ ಆಗಾಗ ಕೋಮು ಸೌಹಾರ್ದ ಕದಡುವ ಘಟನೆಗಳು ಸಂಭವಿಸುತ್ತಿದ್ದರೂ ಸರಕಾರ ಯಾವುದೇ ಕಠಿನ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಕೋಮು ಗಲಭೆಗಳಿಗೆ ತಡೆ ಒಡ್ಡುವ ಇಚ್ಛಾಶಕ್ತಿ ಇದ್ದಿದ್ದೇ ಆಗಿದ್ದರೆ ಕಲ್ಲಡ್ಕದಲ್ಲಿ ಸತತ ಎರಡು ತಿಂಗಳ ನಿಷೇಧಾಜ್ಞೆ ಹೇರಿದ ಬಳಿಕ ಪರಿಸ್ಥಿತಿ ಸುಧಾರಿಸಲು ಸರಕಾರ ದೃಢ ಹೆಜ್ಜೆ ಇಡಬೇಕಾಗಿತ್ತು. 

Advertisement

ಕಾಂಗ್ರೆಸ್‌ ಸರಕಾರದಲ್ಲಿ ಗೃಹ ಇಲಾಖೆ ತೀರಾ ದುರ್ಬಲಗೊಂಡಿರುವುದು ಎದ್ದು ಕಾಣುತ್ತಿದೆ. ಕಾನೂನು ಮತ್ತು ವ್ಯವಸ್ಥೆ ಪಾಲನೆಯಲ್ಲಿ ಸರಕಾರ ದಯನೀಯ ವೈಫ‌ಲ್ಯ ಕಂಡಿರುವುದಕ್ಕೆ ಇತ್ತೀಚೆಗೆ ಅಪರಾಧ ಬ್ಯೂರೊ ಬಹಿರಂಗಪಡಿಸಿದ ಅಂಕಿಅಂಶಗಳೇ ಸಾಕ್ಷಿ. ಹಿಂದಿನ ಗೃಹ ಸಚಿವರು ಕ್ರಿಮಿನಲ್‌ ಆರೋಪ ಹೊತ್ತು ನಿರ್ಗಮಿಸಿದ ಬಳಿಕ ರಾಮಲಿಂಗಾ ರೆಡ್ಡಿ ಗೃಹ ಸಚಿವರಾಗಿದ್ದಾರೆ. ಆದರೆ ಸೌಮ್ಯ ಸ್ವಭಾವದ, ಖಡಕ್‌ ನಿಲುವಿನ ಸಚಿವ ಎಂದು ಹೊಗಳಿಸಿಕೊಂಡಿದ್ದ ರೆಡ್ಡಿ ಬಂದ ಬಳಿಕವಾದರೂ ಗೃಹ ಇಲಾಖೆ ಸುಧಾರಿಸೀತು ಎಂಬ ನಿರೀಕ್ಷೆ ಹುಸಿಯಾಗಿದೆ. ಸಚಿವರು ಬದಲಾದರೂ ಇಲಾಖೆಯ ಕಾರ್ಯವೈಖರಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಪೊಲೀಸ್‌ ಪಡೆಯ ಕಾರ್ಯ ನಿರ್ವಹಣೆ ಮೇಲೆ ಸರಕಾರದ ಹಸ್ತಕ್ಷೇಪದ ಬಗ್ಗೆ ಆಗಾಗ ದೂರುಗಳು ಬರುತ್ತಿವೆ. ಬುಧವಾರ ಹತ್ಯೆ ನಡೆದ ಬಳಿಕ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಗತ್ಯ ಮಾರ್ಗದರ್ಶನ ನೀಡುವುದು ಬಿಟ್ಟು ಪತ್ರಿಕಾಗೋಷ್ಠಿ ಕರೆದು ವಿಪಕ್ಷ ಮತ್ತು ಸಂಘಟನೆಗಳ ಮೇಲೆ ಗೂಬೆ ಕೂರಿಸಲು ಪ್ರಯತ್ನಿರುವುದನ್ನು ನೋಡುವಾಗ ಸರಕಾರವೂ ಗಲಭೆ ನಡೆಯಲಿ ಎಂದು ಆಶಿಸುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ. ಪೊಲೀಸರು ಕಠಿನ ಕ್ರಮ ಕೈಗೊಳ್ಳಲು ಮುಂದಾದರೂ ಕಾಣದ “ಕೈ’ಗಳು ಅವರನ್ನು ತಡೆಯುತ್ತಿವೆ ಎಂಬ ಅನುಮಾನ ಹಿಂದಿನಿಂದಲೂ ಇದೆ. ಇದರಿಂದಾಗಿಯೇ ದುಷ್ಕರ್ಮಿಗಳಿಗೆ ರಾಜಾರೋಷವಾಗಿ ಹತ್ಯೆಗಳನ್ನು , ಹಲ್ಲೆಗಳನ್ನು ಎಸಗುವ ಧೈರ್ಯ ಬಂದಿದೆ ಎನ್ನುವುದು ಸುಳ್ಳಲ್ಲ. ಕಾಟಿಪಳ್ಳದಲ್ಲಿ ನಿನ್ನೆ ನಡೆದ ಘಟನೆಯೇ ಈ ಮಾತನ್ನು ಪುಷ್ಟೀಕರಿಸುತ್ತದೆ. ಮಧ್ಯಾಹ್ನದ ಹೊತ್ತು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿ ಜನರೆದುರೇ ತಲವಾರು ಬೀಸಿ ಹತ್ಯೆಗೈದಿರುವುದು ಪಾತಕಿಗಳಿಗೆ ಕಾನೂನಿನ ಭಯ ಇಲ್ಲ ಎನ್ನುವುದನ್ನು ದೃಢಪಡಿಸುತ್ತದೆ. ಕರಾವಳಿಯ ಕೋಮು ಸಂಘರ್ಷಗಳಿಗೆ ದಶಕಗಳ ಇತಿಹಾಸವಿದೆ. ಬಾಬರಿ ಕಟ್ಟಡ ನೆಲಸಮಗೊಂಡ ಬಳಿಕ ಮತೀಯ ನೆಲೆಯಲ್ಲಿ ಇಬ್ಭಾಗವಾದ ಸಮಾಜ ಇನ್ನೂ ಒಂದುಗೂಡಿಲ್ಲ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನಗಳೆಲ್ಲ ಘೋರವಾಗಿ ವಿಫ‌ಲಗೊಳ್ಳುತ್ತಿವೆ. ರಾಜಕೀಯ ನಾಯಕರ ತುಷ್ಟೀಕರಣ ನೀತಿಯಿಂದಾಗಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅತಿ ಹೆಚ್ಚು ವಿದ್ಯಾವಂತರು ಮತ್ತು ಬುದ್ಧಿವಂತರು ಇರುವ ಕರಾವಳಿ ಜಿಲ್ಲೆಗಳು ಕೋಮು ಗಲಭೆಯಲ್ಲಿ ಕರಾಳ ಇತಿಹಾಸ ಹೊಂದಿರುವುದು ಮಾತ್ರ ದುರದೃಷ್ಟಕರ. 

ಲವ್‌ ಜೆಹಾದ್‌, ಅಕ್ರಮ ಗೋ ಸಾಗಾಟ ಇತ್ಯಾದಿಗಳೆಲ್ಲ ಕರಾವಳಿಯ ನಿತ್ಯದ ಸುದ್ದಿಗಳು. ಹಾಗೆಂದು ಕರಾವಳಿಯಲ್ಲಿರುವ ಎಲ್ಲರೂ ಕೋಮುವಾದಿಗಳೆಂದು ಸಾರ್ವತ್ರೀಕರಿಸಿದರೆ ತಪ್ಪಾಗುತ್ತದೆ. ಆದರೆ ಎರಡೂ ಕೋಮುಗಳಲ್ಲಿ ಕೆಲವು ತೀವ್ರ ಮತಾಂಧತೆ ಮನಃಸ್ಥಿತಿಯವರಿದ್ದಾರೆ. ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡವರಂತಾಡುವ ಇವರಿಗೆ ಲಗಾಮು ಹಾಕಲು ವ್ಯವಸ್ಥೆ ವಿಫ‌ಲಗೊಂಡಿರುವುದು ಇಷ್ಟೆಲ್ಲ ಅನಾಹುತಗಳಿಗೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next