ಗೋಲ್ಡ್‌ಕೋಸ್ಟ್: ಭಾರತದ ಯುವ ಶೂಟರ್ ಓಂಪ್ರಕಾಶ್ ಮಿತರ್ವಾಲ್ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2ನೇ ಕಂಚಿನ ಪದಕ ಜಯಿಸಿದ್ದಾರೆ. ಬುಧವಾರ ನಡೆದ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಈ ಸಾಧನೆಗೈದರು. ಆದರೆ ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಿತು ರಾಯ್ 8ನೇ ಸ್ಥಾನಕ್ಕೆ ಕುಸಿದು ತೀವ್ರ ನಿರಾಸೆ ಮೂಡಿಸಿದರು.
“ಬೆಲ್ಮಾಂಟ್ ಶೂಟಿಂಗ್ ಸೆಂಟರ್’ನಲ್ಲಿ ನಡೆದ 50 ಮೀ. ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಓಂಪ್ರಕಾಶ್ ಒಟ್ಟು 201.1 ಅಂಕದೊಂದಿಗೆ ಕಂಚಿನ ಪದಕ ಜಯಿಸಿದರು. 2 ದಿನಗಳ ಹಿಂದೆ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಅವರು ಕಂಚಿನ ಪದಕ ಪಡೆದಿದ್ದರು.
50 ಮೀ. ಪಿಸ್ತೂಲ್ ಸ್ಪರ್ಧೆಯ ಸ್ವರ್ಣ ಪದಕ ಆಸ್ಟ್ರೇಲಿಯದ ಡೇನಿಯಲ್ ರೆಪಶೋಲಿ ಪಾಲಾಯಿತು. ಅವರು 227.2 ಅಂಕಗಳೊಂದಿಗೆ ಗೋಲ್ಡ್ ಕೋಸ್ಟ್ ಗೇಮ್ಸ್ ದಾಖಲೆ ಸ್ಥಾಪಿಸಿದರು. ಬೆಳ್ಳಿ ಪದಕ ಬಾಂಗ್ಲಾದೇಶದ ಶಕಿಲ್ ಅಹ್ಮದ್‌ಗೆ ಒಲಿಯಿತು. ಶಕಿಲ್ ಗಳಿಕೆ 220.5 ಅಂಕ.
10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬಂಗಾರಕ್ಕೆ ಕೊರಳು ಚಾಚಿದ್ದ ಜಿತು ರಾಯ್ 50 ಮೀ. ವಿಭಾಗದಲ್ಲಿ ಕೇವಲ 105.0 ಅಂಕ ಸಂಪಾದಿಸಿ 8ನೇ ಸ್ಥಾನಕ್ಕೆ ಕುಸಿದದ್ದು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಯಿತು.
ಫೈನಲ್ ಸ್ಪರ್ಧೆಯ ಮೊದಲ ಸುತ್ತಿನ ಬಳಿಕ 6ನೇ ಸ್ಥಾನದಲ್ಲಿದ್ದ ಓಂಪ್ರಕಾಶ್ ಮುಂದಿನೆರಡು ಸುತ್ತುಗಳ ವೇಳೆ 93.7 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ನೆಗೆಯುವಲ್ಲಿ ಯಶಸ್ವಿಯಾಗಿದ್ದರು. ಮುಂದಿನೆರಡು ಶಾಟ್ಸ್ ವೇಳೆಯೂ ಭಾರತೀಯ ಮುನ್ನಡೆ ಮುಂದು ವರಿಯಿತು. ಬಳಿಕ ಆಸೀಸ್ ಶೂಟರ್ ಈ ಸ್ಥಾನಕ್ಕೆ ಲಗ್ಗೆ ಇರಿಸಿದರು.
ಕ್ರಮೇಣ ಓಂ ಪ್ರಕಾಶ್ ಬೆಳ್ಳಿ ಪದಕದ ರೇಸ್‌ನಲ್ಲಿ ಕಾಣಿಸಿಕೊಳ್ಳಬೇಕಾಯಿತು. 186. 3 ಅಂಕ ಸಂಪಾದಿಸಿದ ಓಂ ಪ್ರಕಾಶ್, ಬಾಂಗ್ಲಾ ಎದುರಾಳಿಗಿಂತ ಮೂರಂಕಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮುಂದಿನ ಸುತ್ತಿನಲ್ಲಿ ಇದೇ ನಿಖರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. 7.2 ಹಾಗೂ 7.6 ಅಂಕಗಳೊಂದಿಗೆ ಕುಸಿದು ಕಂಚಿಗೆ ಸಮಾಧಾನಪಡಬೇಕಾಯಿತು.