ನವದೆಹಲಿ: ಇತ್ತೀಚೆಗೆ ಮುಗಿದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬರೀ 16 ವರ್ಷದ ಶೂಟರ್ ಮನುಭಾಕರ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವಮಾನ ಮಾಡಲಾಗಿದೆಯಾ? ಹೌದು ಎನ್ನುವಂತಹ ಸುದ್ದಿಗಳು ಆಂಗ್ಲಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಕಾಮನ್‌ವೆಲ್ತ್‌ನ 10 ಮೀ. ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಕಾರಣ ಹರ್ಯಾಣದಲ್ಲಿ ಭಾಕರ್‌ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಘಟನೆ ನಡೆದಿದೆಯೆಂದು ಹೇಳಲಾಗಿದೆ.
ಆಗಿದ್ದೇನು?: ಆರಂಭದಲ್ಲಿ ಭಾಕರ್‌ಗೆ ಹಾರ ಹಾಕಿ ಕುರ್ಚಿಯೊಂದರಲ್ಲಿ ಕೂರಿಸಲಾಗಿತ್ತು. ಕ್ರಮೇಣ ಗಣ್ಯ ಅತಿಥಿಗಳ ಸಂಖ್ಯೆ ಜಾಸ್ತಿಯಾದ ಕೂಡಲೇ ಭಾಕರ್‌ಗೆ ಕೆಳ ಕೂರುವಂತೆ ಸೂಚಿಸಲಾಯಿತು. ಪರಿಣಾಮ ಸನ್ಮಾನಿ ಸಲ್ಪಟ್ಟ ವ್ಯಕ್ತಿಯಾದರೂ ನೆಲದ ಮೇಲೆ ಕುಳಿತರು ಎಂದು ವರದಿಯಾಗಿದೆ.
ಈ ವರದಿಗಳನ್ನು ಸ್ವತಃ ಭಾಕರ್ ತಂದೆ ರಾಮ್ ಕಿಶನ್ ಭಾಕರ್ ನಿರಾಕರಿಸಿದ್ದಾರೆ. ವರದಿಗಳು ಹೇಗೆಯೇ ಇರಲಿ, ಅವೆಲ್ಲ ಸುಳ್ಳು. ಅಂತಹದ್ದೆಲ್ಲ ಏನೂ ನಡೆದಿಲ್ಲ. ಹಿರಿಯರ ಗೌರವಾರ್ಥ ನನ್ನ ಮಗಳೇ ಕುರ್ಚಿ ಬಿಟ್ಟುಕೊಟ್ಟಿದ್ದಾಳೆ. ಆರಂಭದಲ್ಲಿ ನಾವಿಬ್ಬರೂ ಕುಳಿತಿದ್ದೆವು. ಕೆಲ ಹೊತ್ತಿನ ನಂತರ ಅತಿಥಿಗಳ ಸಂಖ್ಯೆ ಹೆಚ್ಚಾಯಿತು. ಆಗ ನಾನು ಎದ್ದೆ. ಅದನ್ನು ನೋಡಿದ ಮನು, ನೀವೇಕೆ ನಿಲ್ಲುತ್ತೀರಿ, ನಾನು ನಿಲ್ಲುತ್ತೇನೆ ಎಂದು ಹೇಳಿದಳು. ಸಭಾಂಗಣದಲ್ಲಿ ಸ್ಥಳಾವಕಾಶ ಕಡಿಮೆಯಿದ್ದಿದ್ದರಿಂದ ಇದು ಅನಿವಾರ್ಯವಾಗಿತ್ತು ಎಂದು ರಾಮ್ ಕಿಶನ್ ಹೇಳಿಕೊಂಡಿದ್ದಾರೆ.
ಈ ಬಾರಿ ಕಾಮನ್‌ವೆಲ್ತ್‌ನಲ್ಲಿ ಭಾರತದ ವಿಶ್ವವಿಖ್ಯಾತ ಶೂಟರ್ ಹೀನಾ ಸಿಧುರನ್ನು ಸೋಲಿಸಿ 10 ಮೀ. ಏರ್ ಪಿಸ್ತೂಲ್‌ನಲ್ಲಿ ಭಾಕರ್ ಚಿನ್ನ ಗೆದ್ದಿದ್ದರು.