ಗೋಲ್ಡ್‌ಕೋಸ್ಟ್: ಹರಿಯಾಣದ ವೇಟ್‌ಲಿಫ್ಟರ್ ದೀಪಕ್ ಲಾಥರ್ ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದ ಭಾರತದ ಅತೀ ಕಿರಿಯ ವೇಟ್‌ಲಿಫ್ಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಪುರುಷರ ವಿಭಾಗದ 69 ಕೆಜಿ ವಿಭಾಗದಲ್ಲಿ ಲಾಥರ್ ಕಂಚಿನ ಪದಕವನ್ನು ಕೊರಳಿಗೆ ಅಲಂಕರಿಸಿಕೊಂಡರು. ಅಂದಹಾಗೆ, ಲಾಥರ್ ವಯಸ್ಸು ಕೇವಲ 18 ವರ್ಷ!
ದೀಪಕ್ ಲಾಥರ್ ಒಟ್ಟು 295 ಕೆಜಿ (136+159) ತೂಕವೆತ್ತಿ ತೃತೀಯ ಸ್ಥಾನಿ ಯಾದರು. ತನ್ನ ಸಮೀಪದ ಪ್ರತಿಸ್ಪರ್ಧಿ, ಸಮೋವಾದ ವೈಪವ ಲೋನೆ ಅವರಿಗಿಂತ 3 ಕೆಜಿ ಹೆಚ್ಚುವರಿ ಭಾರ ಎತ್ತುವ ಮೂಲಕ ಲಾಥರ್‌ಗೆ ಈ ಪದಕ ಒಲಿಯಿತು. ವೇಲ್ಸ್‌ನ ಗ್ಯಾರೆತ್ ಇವಾನ್ಸ್ ಚಿನ್ನ (299 ಕೆಜಿ) ಮತ್ತು ಶ್ರೀಲಂಕಾದ ಇಂಡಿಕಾ ದಸ್ಸನಾಯಕೆ ಬೆಳ್ಳಿ ಪದಕ (297 ಕೆಜಿ) ಗೆದ್ದರು. ದೀಪಕ್ ಲಾಥರ್ ಅವರ ಈ ಯಶಸ್ಸಿನಲ್ಲಿ ಅದೃಷ್ಟದ ಪಾತ್ರವೂ ಇತ್ತು. ಸಮೋವಾದ ಲಿಫ್ಟರ್ ಕೊನೆಯ 2 ಪ್ರಯತ್ನದ ವೇಳೆ ಫೌಲ್ ಮಾಡಿದ್ದರಿಂದ ಕಂಚು ಲಾಥರ್‌ಗೆ ಒಲಿಯಿತು.
“ಸಮೋವಾದ ಲಿಫ್ಟರ್ ತನ್ನ ಪ್ರಯತ್ನದಲ್ಲಿ ವಿಫಲರಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೆ. ಹಾಗೆಯೇ ಆಯಿತು. ಇದು ಕೆಟ್ಟದ್ದು ಹಾಗೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾದದ್ದು ಎಂಬುದು ಗೊತ್ತು. ಆದರೆ ಇದಕ್ಕೆಲ್ಲ ನಾನು ಹೊಣೆಯಲ್ಲ…’ ಎಂದು ಲಾಥರ್ ನಗುತ್ತ ಪ್ರತಿಕ್ರಿಯಿಸಿದರು. ಲಾಥರ್ ಹೀಗೆ ಹಾರೈಸುವುದಕ್ಕೆ ಇನ್ನೂ ಒಂದು ಕಾರಣವಿದೆ. ಕಳೆದ ವರ್ಷದ ಕಾಮನ್ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಲಾಥರ್ ಅವರನ್ನು ಕೇವಲ ಒಂದು ಕೆಜಿ ಅಂತರದಿಂದ ಸೋಲಿಸುವ ಮೂಲಕ ವೈಪವ ಲೋನೆ ಬೆಳ್ಳಿ ಪದಕ ಜಯಿಸಿದ್ದರು!
ಇದು ದೀಪಕ್ ಲಾಥರ್ ಪ್ರತಿನಿಧಿಸುತ್ತಿರುವ ಮೊದಲ ಕಾಮನ್ವೆಲ್ತ್ ಗೇಮ್ಸ್. 15ರ ಹರೆಯದಲ್ಲೇ 62 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಹಿರಿಮೆ ಈ ಹರಿಯಾಣಿಗನದ್ದು. “ಇಂದಿನ ಸ್ಪರ್ಧೆ ಅತ್ಯಂತ ಕಠಿನವಾಗಿತ್ತು. ಬಹಳಷ್ಟು ತಪ್ಪು ಮಾಡಿದ್ದೇನೆ. ಇದನ್ನು ತಿದ್ದಿಕೊಳ್ಳಬೇಕಿದೆ. ಇದನ್ನು ಅದೃಷ್ಟದ ಪದಕವೆಂದೇ ಭಾವಿಸಿದ್ದೇನೆ’ ಎಂದು ಆರ್ಮಿ ನ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದ ಲಾಥರ್ ಹೇಳಿದರು.
ಆರಂಭದಲ್ಲಿ ಲಾಥರ್ ಈಜಿನತ್ತ ಒಲವು ತೋರಿಸಿದ್ದರು. ಆದರೆ ಹರಿಯಾಣದವರ ದೇಹಸ್ಥಿತಿಗೆ ಈಜು ಒಗ್ಗುವುದಿಲ್ಲ ಎಂಬ ಅಲ್ಲಿನ ತರಬೇತುದಾರರ ಸಲಹೆಯ ಮೇರೆಗೆ ವೇಟ್‌ಲಿಫ್ಟರ್ ಆಗಿ ಪರಿವರ್ತನೆಗೊಂಡಿದ್ದರು. ಆಗ ತನಗೆ ವೇಟ್‌ಲಿಫ್ಟಿಂಗ್ ಬಗ್ಗೆ ಸ್ವಲ್ಪವೂ ಒಲವಿರಲಿಲ್ಲ. ಈಗ ವಿಪರೀತ ಸಂತೋಷವಾಗುತ್ತಿದೆ ಎಂದರು. ಏಶ್ಯಾಡ್ ಹಾಗೂ 2020ರ ಒಲಿಂಪಿಕ್ಸ್ ತನ್ನ ಮುಂದಿನ ಗುರಿ ಎಂದರು.