ಗೋಲ್ಡ್‌ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ ವನಿತಾ ಡಬಲ್ಸ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಪಳ್ಳಿಕಲ್-ಜೋಶ್ನಾ ಚಿನ್ನಪ್ಪ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರವಿವಾರ ನಡೆದ ಫೈನಲ್‌ನಲ್ಲಿ ಗ್ಲಾಸೊYà ಗೇಮ್ಸ್ ಚಾಂಪಿಯನ್ ದೀಪಿಕಾ-ಜೋಶ್ನಾ ನ್ಯೂಜಿಲ್ಯಾಂಡಿನ ಜೋಯೆಲ್ ಕಿಂಗ್-ಅಮಂಡಾ ಲ್ಯಾಂಡರ್ ಮರ್ಫಿ ಜೋಡಿ ವಿರುದ್ಧ 9-11, 8-11 ಅಂತರದ ಸೋಲನುಭವಿಸಿದರು.
ಕೆಲವು ಹಂತದಲ್ಲಿ ಕಳಪೆ ಆಟ
“ನಾವು ಫೈನಲ್‌ನಲ್ಲಿದ್ದುದೇ ಒಂದು ಮಹಾನ್ ಸಾಧನೆ. ಗೆಲ್ಲುವ ಎಲ್ಲ ಅವಕಾಶ ನಮ್ಮ ಮುಂದಿತ್ತು. ಆದರೆ ನ್ಯೂಜಿಲ್ಯಾಂಡ್ ಆಟಗಾರ್ತಿಯರು ನಿಜಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ದರು. ನಾವು ಕೆಲವು ಹಂತದಲ್ಲಿ ಕಳಪೆ ಆಟವಾಡಿದೆವು. ನಿಜಕ್ಕೂ ಬೇಸರವಾಗುತ್ತಿದೆ. ಆದರೆ ಕ್ರೀಡೆಯಲ್ಲಿ ಇದೆಲ್ಲ ಮಾಮೂಲು…’ ಎಂದು ಜೋಶ್ನಾ ಚಿನ್ನಪ್ಪ ಬೇಸರದಿಂದ ಪ್ರತಿಕ್ರಿಯಿಸಿದರು.ರೆಫ್ರಿ ನೀಡಿದ ಕೆಲವು ತೀರ್ಪುಗಳು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿದವು ಎಂದು ಹೇಳಲಾಗುತ್ತಿದೆ.
ದೀಪಿಕಾ ಪಳ್ಳಿಕಲ್ ಕೂಡ ಇದರ ವಿರುದ್ಧ ಧ್ವನಿಯೆತ್ತಿದ್ದು, ರೆಫ್ರಿಯ ಕೆಲವು ಕರೆಗಳು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿ ಯಾಗಿದ್ದವು. ಈ ಕರೆಗಳಿಂದ ಪಂದ್ಯದ ಚಿತ್ರಣವೇ ಬದಲಾಯಿತು. ಈ ಬಗ್ಗೆ ರೆಫ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಕ್ರೀಡೆ ಬೆಳೆಯುವುದಿಲ್ಲ…’ ಎಂದು ದೀಪಿಕಾ ಪಳ್ಳಿಕಲ್ ಹೇಳಿದರು.
ಸೌರವ್ ಗೋಸಲ್ ಜತೆಗೂಡಿ ಸ್ಕ್ವಾಷ್ ಮಿಕ್ಸೆಡ್ ಫೈನಲ್ ಸಂದರ್ಭದಲ್ಲೂ ದೀಪಿಕಾ ರೆಫ್ರಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಿಶ್ರ ಡಬಲ್ಸ್ ಫೈನಲ್‌ನಲ್ಲೂ ಎಡವಿದ ಭಾರತೀಯ ಜೋಡಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿತ್ತು.
ಆದರೆ ಕಾಮನ್ವೆಲ್ತ್ ಗೇಮ್ಸ್ ಸ್ಕ್ವಾಷ್ ಪದಕದ ಲೆಕ್ಕಾಚಾರದಲ್ಲಿ ಭಾರತ ಈ ಬಾರಿ ಅತ್ಯಧಿಕ ಸಂಖ್ಯೆಯ ಪದಕಗಳನ್ನು ತನ್ನದಾಗಿಸಿಕೊಂಡಿತು. 1998-2010ರ ವರೆಗಿನ ಗೇಮ್ಸ್‌ಗಳಲ್ಲಿ ಭಾರತ ಸ್ಕ್ವಾಷ್ ಪದಕವನ್ನೇ ಗೆದ್ದಿರಲಿಲ್ಲ. ಆದರೆ 2014ರಲ್ಲಿ ದೀಪಿಕಾ-ಜೋಶ್ನಾ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.