Advertisement
ಲೋಹದಂತೆ ಹೊಳೆವ ಕಪ್ಪು ಬಣ್ಣ -ವರ್ಷದ ಕೆಲವು ಸಮಯದಲ್ಲಿ ಇದ್ದು, ಮೈಮೇಲೆಲ್ಲಾ ಬಿಳಿ ಚುಕ್ಕೆ ಇರುತ್ತದೆ. ಇದರ ಜೊತೆಗೆ ಲೋಹದಂತೆ ಹೊಳೆವ -ಕಂದು, ನೀಲಿ, ಹಸಿರು ಬಣ್ಣದ ಗರಿಗಳ ಮಧ್ಯೆ ಬಿಳಿಬಣ್ಣದ ಚುಕ್ಕೆ ಇರುತ್ತದೆ. ವರ್ಷ ಪೂರ್ತಿ ಇದರ ಮೈ ಬಣ್ಣ ಒಂದೇರೀತಿ ಇರುವುದಿಲ್ಲ ಅನ್ನೋದು ವಿಶೇಷ.
ಈ ಹಕ್ಕಿ ಕೆಲವೊಮ್ಮೆ ಬೇರೆ ಪ್ರಬೇಧದ ಹಕ್ಕಿಯೇನೋ ಎಂಬ ಭ್ರಮೆ ಹುಟ್ಟಿಸುತ್ತದೆ. ಇದರ ಅಧ್ಯಯನದಲ್ಲಿ ಅತಿ ಸೂಕ್ಷ್ಮ ಅವಲೋಕನ ಮತ್ತು ಗ್ರಹಿಕೆ ಅವಶ್ಯಕ. ಬಣ್ಣ ಮತ್ತು ಆಕಾರದ ವೈವಿಧ್ಯತೆಯಿಂದಾಗಿ ಈ ಹಕ್ಕಿಯಲ್ಲಿ 25 ಕ್ಕಿಂತ ಹೆಚ್ಚು ಭಿನ್ನ ವರ್ಗಗಳನ್ನು ಗುರುತಿಸಲಾಗಿದೆ. ಇದರ ಕಾಲು ತಿಳಿ ಗುಲಾಬಿ ಬಣ್ಣದಿಂದ ಕೂಡಿದೆ. ಪ್ರೌಢಾವಸ್ಥೆ ತಲುಪಿದ ಹಕ್ಕಿಯ ಬಣ್ಣ ಸ್ವಲ್ಪ ಗಾಢ ವರ್ಣದಿಂದ ಕೂಡಿರುತ್ತದೆ. ಎಳೆಯ ಪ್ರಾಯದ್ದು ಕಂದುಬಣ್ಣದಿಂದ ಕೂಡಿರುತ್ತದೆ. ಈ ಹಕ್ಕಿಯು ಗುಂಪಾಗಿ ಬದುಕುತ್ತದೆ. ಹೀಗಾಗಿ ಸದಾ ಗದ್ದಲ ಮಾಡುತ್ತಾ -ಪರಸ್ಪರ ವಿನೋದಕ್ಕಾಗಿ ಜಗಳ ಪ್ರದರ್ಶಿಸುತ್ತಿರುತ್ತದೆ. ಇವುಗಳಲ್ಲಿ ಒಟ್ಟಿಗೆ ಬಾಳುವ ಸಂಬಂಧ-ಅನುಬಂಧ ಅಗಾಧವಾಗಿದೆ. ಒಟ್ಟಾಗಿ ಬಾಳುವಾಗ ಚಿಕ್ಲಿಂಗ್ ಚರ್, ಚಿರ್, ಹಾಗೂ ಸಂಗೀತದಂತೆ ಇಂಪಾಗಿರದ ಗರ್, ಗರ್ ಎಂಬ ದನಿ ಸಿಳ್ಳೆಯು ಕೇಳಲು ಹಿತವಾಗಿರುತ್ತದೆ. ಸಹವರ್ತಿಯಾಗಿ ವಾಸಿಸುವ, ಹಕ್ಕಿಗಳ ದನಿಗಳ ಅನುಕರಣೆ ಮಾಡುವ ನೈಪುಣ್ಯ ಈ ಹಕ್ಕಿಗಿದೆ. ಶೇಕ್ಸ್‌ಫೀಯರ್‌ನ ಸಾಹಿತ್ಯದಲ್ಲಿ ಈ ಹಕ್ಕಿಯ ಉಲ್ಲೇಖವಿದೆ. ಈ ಹಕ್ಕಿಯ ಕುರಿತು 11ನೇ ಶತಮಾನಕ್ಕಿಂತ ಹಿಂದೆಯೇ ದಾಖಲೆ ಸಿಕ್ಕಿದೆ. ತನ್ನ ಇರುನೆಲೆಗಿಂತ ಭಿನ್ನವಾದ ತಾಪಮಾನ ಇರುವಲ್ಲಿಯೂ ಈ ಹಕ್ಕಿಯ ಪ್ರಬೇಧಗಳು ವಾಸಿಸುವುದು ಇನ್ನೊಂದು ವಿಶೇಷ.
Related Articles
Advertisement
ಆಸ್ಟ್ರೇಲಿಯಾ, ನ್ಯೂಜಿಲಾಂಡ್, ಕೆನಡಾ, ಮೆಕ್ಸಿಕೋ, ಪೆರು, ಅರ್ಜೆಂಟಿನಾ, ದಕ್ಷಿಣ ಆಫ್ರಿಕಾ, ಏಷಿಯಾ, ಪಾಕಿಸ್ತಾನಗಳಲ್ಲೂ ಇದರ ಪ್ರಬೇಧ ಕಾಣಬಹುದು. ಭಾರತಕ್ಕೆ ಈ ಹಕ್ಕಿ ವಿದೇಶದಿಂದ ಚಳಿಗಾಲದಲ್ಲಿ ಬರುತ್ತದೆ ಎಂಬ ನಂಬಿಕೆ ಇದೆ. ಹಿಮಾಲಯದ ಭಾಗ, ಕಾಶ್ಮೀರ, ಚಳಿಗಾಲದಲ್ಲಿ ಉತ್ತರ ಭಾರತದ ತುಂಬೆಲ್ಲಾ ಕಾಣಸಿಗುತ್ತದೆ. ದೊಡ್ಡ ಗುಂಪಿನಲ್ಲಿ ವಲಸೆ ಬರುವ ಹಕ್ಕಿ . ಹಾಗಾಗಿ ಸುಲಭವಾಗಿ ಇದು ಬರುವುದನ್ನು ಗ್ರಹಿಸಬಹುದು.
ಈ ಹಕ್ಕಿಗೆ ಚಿಕ್ಕ ಹುಳುಗಳು ಪ್ರಿಯ. ಮೇ ನಿಂದ ಜೂನ್ ಅವಧಿಯಲ್ಲಿ ಗೂಡು ಕಟ್ಟುತ್ತವೆ. ಇವು ಸಾಮಾನ್ಯವಾಗಿ ಮರಕುಟುಕ, ಬಾರ್ಬೆಟ್ ಕೊರೆದ ಗೂಡಿನಲ್ಲಿ, ಇಲ್ಲವೇ ಕಲ್ಲು, ಕಟ್ಟಡಗಳ ಬಿರುಕುಗಳಲ್ಲಿ, ನಾರು ಬೇರು, ಹಕ್ಕಿಯ ಗರಿಗಳನ್ನು ತುರುಕಿ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಮೊಟ್ಟೆ ಇಡುವ ಸಂದರ್ಭದಲ್ಲಿ ಗಂಡು-ಹೆಣ್ಣಿನ ವರ್ತನೆ, ಪ್ರಣಯ, ವೈರಿ ಹಕ್ಕಿಗಳಿಂದ ತನ್ನನ್ನು ಮತ್ತು ತನ್ನ ಮರಿಗಳನ್ನು ಕಾಪಾಡಿಕೊಳ್ಳಲು ವಿಭಿನ್ನವಾಗಿ ಕೂಗುತ್ತದೆ. ಇಂದು ನಮಗೆ ಲಭ್ಯ ಇರುವ ಇಲೆಕ್‌ಟ್ರೋನಿಕ್ ಸಾಮಗ್ರಿ ಬಳಸಿ -ಇದರ ಅಧ್ಯಯನ -ಹಾರಾಟ -ಅದರ ಉಪಯೋಗ ಕುರಿತು ಅಧ್ಯಯನ ನಡೆದರೆ ಈ ವಿಸ್ಮಯ ಹಕ್ಕಿಯು ಮನುಷ್ಯನರ ಸುಧಾರಣೆಗೂ ಸಹಾಯಕವಾದೀತು.