ಸುವರ್ಣ ವಿಧಾನಸೌಧ: ಸಭಾಪತಿ ಮತ್ತು ಸಭಾಧ್ಯಕ್ಷರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಮೊದಲೇ ಪತ್ರಿಕಾಗೋಷ್ಠಿ ಮಾಡಿದ್ದರಲ್ಲೂ ಯಾವ ಗೊಂದಲವೂ ಇಲ್ಲ. ಇದಕ್ಕೂ ಮೊದಲು ನಾವಿಬ್ಬರೂ ಮಾತನಾಡಿಕೊಂಡಿದ್ದೆವು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದರು.
ಸೋಮವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಸಭಾಪತಿಗಳು ಹಾಗೂ ಸಭಾಧ್ಯಕ್ಷರು ಅಧಿವೇಶನಕ್ಕೆ ಮುನ್ನ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ್ದರ ಬಗ್ಗೆ ಸಾಕಷ್ಟು ಗೊಂದಲಗಳಿವೆ.
ಸಾರ್ವಜನಿಕರಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಸಭಾಪತಿ ಮತ್ತು ಸಭಾಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಅಭಿಪ್ರಾಯ ಮೂಡಿದೆ. ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದರು.
ನಾನು ಡಿ.7ರಂದು ಬೆಳಗಾವಿಗೆ ಬೇರೆ ಕಾರ್ಯಕ್ರಮ ನಿಮಿತ್ತ ಬಂದಿದ್ದೆ. ಆಗ ಪರಿಷತ್ಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದೆ. ಇಲ್ಲಿಗೆ ಬರುವ ಮುನ್ನ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಜೊತೆ ಚರ್ಚೆ ಸಹ ನಡೆಸಿದ್ದೆ. ನಾವಿಬ್ಬರೂ ಮಾತನಾಡಿಕೊಂಡ ಮೇಲೆಯೇ ನಾನು ಮೊದಲೇ ಪತ್ರಿಕಾಗೋಷ್ಠಿ ಮಾಡಿದ್ದೆ. ಇದರಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.